Home ಟಾಪ್ ಸುದ್ದಿಗಳು ಮಧ್ಯಪ್ರದೇಶ | ಸಚಿವರಿಂದ ದ್ವೇಷಭಾಷಣ ಬೆನ್ನಲ್ಲೇ ಗರ್ಭಾ ಪ್ರವೇಶಿಸಿದ 14 ಮುಸ್ಲಿಮರ ಬಂಧನ

ಮಧ್ಯಪ್ರದೇಶ | ಸಚಿವರಿಂದ ದ್ವೇಷಭಾಷಣ ಬೆನ್ನಲ್ಲೇ ಗರ್ಭಾ ಪ್ರವೇಶಿಸಿದ 14 ಮುಸ್ಲಿಮರ ಬಂಧನ

ಇಂದೋರ್: ನವರಾತ್ರಿ ಹಬ್ಬದ ಪ್ರಯುಕ್ತ ಗರ್ಭಾ ನಡೆಸುತ್ತಿದ್ದ ಸ್ಥಳಗಳಿಗೆ ಪ್ರವೇಶಿಸಿದ ಆರೋಪದಲ್ಲಿ ಒಂದು ವಾರದ ಅವಧಿಯಲ್ಲಿ ಬಜರಂಗದಳ ಕಾರ್ಯಕರ್ತರು ಹಲವು ಮುಸ್ಲಿಮ್ ಯುವಕರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಈ ಪೈಕಿ ಹಲವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇದುವರೆಗೂ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದ್ದು, ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಅವರು ಹಿಂದೂ ಹಬ್ಬದ ಸ್ಥಳಗಳಿಗೆ ಭೇಟಿ ನೀಡುವ ಮುಸ್ಲಿಮರ ವಿರುದ್ಧ ದ್ವೇಷಭಾಷಣದ ಬಳಿಕ ಈ ಬೆಳವಣಿಗೆ ನಡೆದಿದೆ.

ಗರ್ಭಾ ಪೆಂಡಲ್’ಗಳು ಲವ್ ಜಿಹಾದ್’ನ ಕೇಂದ್ರಗಳಾಗುತ್ತಿವೆ ಮತ್ತು ದುರ್ಗಾ ದೇವಿಯ ಮೇಲೆ ನಂಬಿಕೆಯಿಲ್ಲದವರು ಗರ್ಭಾದ ಕಡೆಗೆ ಹೋಗಬಾರದು ಎಂದು ರಾಜ್ಯ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಭಾಷಣ ಮಾಡಿದ್ದರು.

ಈ ಮಧ್ಯೆ ಗರ್ಭಾ ಪ್ರವೇಶಕ್ಕೆ ಮೊದಲು ತಮ್ಮ ಗುರುತಿನ ಚೀಟಿ ತೋರಿಸುವುದನ್ನು ಕಡ್ಡಾಯಗೊಳಿಸಲು ಗೃಹಸಚಿವ ನರೋತ್ತಮ್ ಮಿಶ್ರಾ ಸೂಚಿಸಿದ್ದರು. ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಮತ್ತು ಮಾಜಿ ಮುಖ್ಯಮಂತ್ರಿ ಉಮಾಭಾರತಿ ಸೇರಿದಂತೆ ಹಲವರು ಈ ವಿಚಾರದಲ್ಲಿ ಉಷಾ ಠಾಕೂರ್ ಅವರನ್ನು ಬೆಂಬಲಿಸಿದ್ದರು.

Join Whatsapp
Exit mobile version