ಕ್ಯಾಲಿಕೆಟ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಭೆ ಅಕ್ಟೋಬರ್ 4ರಂದು ಕೇರಳದ ಕ್ಯಾಲಿಕಟ್ ನಲ್ಲಿ ನಡೆಯಿತು. ಈ ಸಭೆಯಲ್ಲಿ ದೇಶದ ಸಾಮಾಜಿಕ, ರಾಜಕೀಯ ಸಂಬಂಧಿತ ವಿಚಾರಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಬಿಜೆಪಿಯ ಒಕ್ಕೂಟ ಸರ್ಕಾರದ ತಪ್ಪು ನೀತಿಗಳಿಂದಾಗಿ ಭಾರತದಲ್ಲಿ ನಾವು ಹಿಂದೆಂದೂ ಕಾಣದಂತಹ ಆರ್ಥಿಕ ದುಸ್ಥಿತಿಯನ್ನು ಕಾಣುತ್ತಿದ್ದೇವೆ. ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ಭಾರತದ ಅರ್ಥವ್ಯವಸ್ಥೆ ದುರಂತದೆಡೆಗೆ ಸಾಗುತ್ತಿದೆ ಎನ್ನುವುದರ ಸಂಕೇತವಾಗಿದೆ. ಒಂದೆಡೆ ಮಿತಿಮೀರಿದ ನಿರುದ್ಯೋಗ ಸಮಸ್ಯೆ ಇಡೀ ದೇಶದ ಜನತೆಯನ್ನು ಕಂಗೆಡಿಸಿದ್ದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಸರ್ಕಾರದ ವಿಫಲ ಆರ್ಥಿಕ ನೀತಿಗಳಿಂದಾಗಿ ಇಡೀ ದೇಶ ಹತಾಶಗೊಂಡಿದೆ. ಇಷ್ಟಾದರೂ ಬಿಜೆಪಿ ಸರ್ಕಾರ ಆರ್ಥಿಕ ಪ್ರಗತಿಯ ಕಡೆಗೆ ಗಮನ ಕೊಡದೆ ಕೇವಲ ‘ಪಶುಪಾಲನ್’ ಯೋಜನೆಯಂತಹ ವೈಭವೀಕರಿಸುವ ಯೋಜನೆಗಳನ್ನು ರೂಪಿಸುವುದರಲ್ಲಿ ನಿರತವಾಗಿದೆ. ಇದರ ಮಧ್ಯೆ ದೇಶದ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ಕುಸಿದಿದ್ದರೂ ವಿರೋಧ ಪಕ್ಷಗಳು ಮೌನಕ್ಕೆ ಶರಣಾಗಿರುವುದು ದೇಶದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.
ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿರುವ ಭಾರತ, ಏಕತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶ. ಎಲ್ಲರನ್ನೂ ಒಳಗೊಳ್ಳುವಿಕೆ, ಸಹಬಾಳ್ವೆ, ಐಕ್ಯತೆಯೇ ಈ ದೇಶದ ಮೂಲ ಸತ್ವ. ಆದರೆ ಪ್ರಸ್ತುತ ಸನ್ನಿವೇಶ ಭಯಾನಕವಾಗಿದ್ದು, ಕೋಮು ದ್ವೇಷ ಮತ್ತು ಜಾತಿ ಭೇದ ಇಡೀ ದೇಶದಲ್ಲಿ ಹಬ್ಬಿದೆ. ಅದನ್ನು ಈ ಫ್ಯಾಶಿಸ್ಟ್ ಶಕ್ತಿಗಳು ಈ ಸರ್ಕಾರದ ಬೆಂಬಲದೊಂದಿಗೆ ನಿರ್ಭಯವಾಗಿ ಆನಂದಿಸುತ್ತಿದ್ದಾರೆ. ಈ ಪ್ರಜಾಪ್ರಭುತ್ವ ವಿರೋಧಿ ಸರ್ಕಾರವನ್ನು ಜನರು ಒಗ್ಗಟ್ಟಾಗಿ ಸೋಲಿಸಿ ದೇಶವನ್ನು ಸಂವಿಧಾನ ವಿರೋಧಿ ಶಕ್ತಿಗಳಿಂದ ಕಾಪಾಡಬೇಕು ಎಂದು ಎಸ್ ಡಿಪಿಐ ಕರೆ ಕೊಡುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಘೋಷವಾಕ್ಯ “ಹಸಿವು ಮುಕ್ತ ಸ್ವಾತಂತ್ರ್ಯ” ಮತ್ತು “ಭಯಮುಕ್ತ ಸ್ವಾತಂತ್ರ್ಯ” ಆಗಿದ್ದು ಆ ನಿಟ್ಟಿನಲ್ಲಿ ಅದು ಮುಂದೆ ಸಾಗುತ್ತಿದೆ. ಎಸ್ ಡಿಪಿಐ ಪಕ್ಷ ಸಾಮಾಜಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದು, ಭಾರತದ ಸಂವಿಧಾನದ ಮೌಲ್ಯಗಳನ್ನು ಮತ್ತಷ್ಟು ಬಲಗೊಳಿಸಲು ಶ್ರಮಿಸುತ್ತಿದೆ. ಆದರೆ, ಮಾಧ್ಯಮದಲ್ಲಿನ ಸ್ಥಾಪಿತ ಹಿತಾಸಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಎಸ್ ಡಿಪಿಐ ಪಕ್ಷದ ವಿರುದ್ಧ ಕಲ್ಪಿತ ಮತ್ತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮತಗಳ ಧ್ರುವೀಕರಣದಂತಹ ದೃಷ್ಕೃತ್ಯಗಳನ್ನು ಮಾಡುತ್ತಿದೆ. ಆದರೆ ಎಸ್ ಡಿಪಿಐ ಪಕ್ಷ ಇಂತಹ ಸ್ಥಾಪಿತ ಹಿತಾಸಕ್ತಿಗಳನ್ನು ಜನರ ಬೆಂಬಲದೊಂದಿಗೆ ಸಮರ್ಥವಾಗಿ ಎದುರಿಸಲಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಈ ಸಭೆಯ ನೇತೃತ್ವವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಅಡ್ವಕೇಟ್ ಶರ್ಫುದ್ದೀನ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಇಲ್ಯಾಸ್ಸ್, ಅಬ್ದುಲ್ ಮಜೀದ್ ಫೈಝಿ, ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ಫೈಝಲ್ ಇಝ್ಝುದ್ದೀನ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಮುಹಮ್ಮದ್ ಮುಬಾರಕ್, ಸಿ.ಪಿ. ಅಬ್ದುಲ್ ಲತೀಫ್, ಅಶ್ರಫ್ ಮುವಟ್ಟುಪುಳ, ಅಬ್ದುಲ್ ಮಜೀದ್ ಕೆ.ಹೆಚ್. ಅವರು ಉಪಸ್ಥಿತರಿದ್ದರು.