Home ಟಾಪ್ ಸುದ್ದಿಗಳು ಸಹಬಾಳ್ವೆ, ಐಕ್ಯತೆ ಗಟ್ಟಿಗೊಳಿಸಲು ಮಸೀದಿ ದರ್ಶನ ಕಾರ್ಯಕ್ರಮ: ಉಸ್ಮಾನ್ ಷರೀಫ್

ಸಹಬಾಳ್ವೆ, ಐಕ್ಯತೆ ಗಟ್ಟಿಗೊಳಿಸಲು ಮಸೀದಿ ದರ್ಶನ ಕಾರ್ಯಕ್ರಮ: ಉಸ್ಮಾನ್ ಷರೀಫ್

ಬೆಂಗಳೂರು: ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿ ಮತ್ತು ಸಮಾನ ಮನಸ್ಕರೊಂದಿಗೆ ಸೇರಿ ಒಂದು ಅಭಿಯಾನದಡಿ ಆಯೋಜಿಸಿದ್ದ ಮಸೀದಿ ದರ್ಶನ ಎಂಬ ವಿನೂತನ ಕಾರ್ಯಕ್ರಮ ಶನಿವಾರ ನಡೆಯಿತು.

ನೂರಾರು ಹಿಂದೂ, ಸಿಖ್ , ಜೈನ ಸಮುದಾಯದ ಬಾಂಧವರು ಖಾದ್ರಿ ಇ ಮಸೀದಿಗೆ ಆಗಮಿಸಿ ನಮಾಝ್ ಹಾಗೂ ಪೂಜಾ ವಿಧಿ ವಿಧಾನಗಳ ಕುರಿತು ಮಾಹಿತಿ ಪಡೆದರು.

ಬರಹಗಾರ, ಚಿಂತಕ ಚಿಂತನ್, ಎಸ್ ಡಿಪಿಐ ಪಕ್ಷದ ಹೋರಾಟಗಾರ ಭಾಸ್ಕರ್ ಪ್ರಸಾದ್ , ವಿವಿಧ ಧರ್ಮಗಳ ಮುಖಂಡರು, ಪ್ರಗತಿಪರರು ಭಾಗವಹಿಸಿ ಮುಸ್ಲಿಂ ಸಂಪ್ರದಾಯ, ಆಚಾರ, ವಿಚಾರ, ಪೂಜಾ ವಿಧಾನಗಳು, ನಮಾಝ್ , ಮುಸ್ಲಿಂ ಧಾರ್ಮಿಕ ಇತಿಹಾಸ ಕುರಿತು ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜುಮ್ಮಾ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಉಸ್ಮಾನ್ ಷರೀಫ್, ಸಾರ್ವಜನಿಕರಿಗೆ ಮಸೀದಿಗಳ ಪರಿಚಯಕ್ಕಾಗಿ ಮಸೀದಿ ದರ್ಶನ ಕಾರ್ಯಕ್ರಮವನ್ನು ಬೆಂಗಳೂರಿನ  ಮಸೀದಿ  ಇ ಖಾದ್ರಿಯಾದಲ್ಲಿ ಆಯೋಜಿಸಲಾಗಿದೆ. ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು, ಬಾಂಧವ್ಯವನ್ನು ಗಟ್ಟಿಗೊಳಿಸಲು ಸಹಬಾಳ್ವೆಯನ್ನು ಹಚ್ಚಿಸಲು ಮಸೀದಿ ದರ್ಶನ ಕಾರ್ಯಕ್ರಮ ಎಲ್ಲಾ ಧರ್ಮಗಳ ಎಲ್ಲ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದೆ. ಮಸೀದಿಯಲ್ಲಿನ ಆರಾಧನಾ ವಿಧಾನಗಳು ವಿವಿಧ ಆಯಾಮಗಳನ್ನು ಪರಿಚಯಿಸಲು ಇಂತಹ ಕಾರ್ಯಕ್ರಮ ನಡೆಸಲಾಗುತ್ತದೆ. ಜತೆಗೆ ಇಲ್ಲಿನ ಸಂವಾದದಲ್ಲಿ ಹಿಂದೂ ಬಾಂಧವರು ಭಾಗವಹಿಸಿ ಮಸೀದಿಯ, ಪ್ರಾರ್ಥನಾ ವಿಧಿ ವಿಧಾನಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಚಿಂತಕ, ಬರಹಗಾರ ಚಿಂತನ್ ಮಾತನಾಡಿ,  ಮಸೀದಿಯ ಬಗ್ಗೆ  ಸಾರ್ವಜನಿಕರಲ್ಲಿ ಒಂದು ತಪ್ಪು ಕಲ್ಪನೆ, ಆತಂಕ ಮನೆ ಮಾಡಿದೆ. ಮಸೀದಿಯಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದನ್ನು ತೋರಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಸ್ವಾಗತಾರ್ಹ. ಅನ್ಯ ಧರ್ಮಗಳ ಬಗ್ಗೆ  ಮಾತನಾಡುವವರು ಮಸೀದಿಗೆ ಭೇಟಿ ನೀಡಿ ಇಲ್ಲಿ ಪ್ರಾರ್ಥನಾ ವಿಧಿ ವಿಧಾನಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇಂದು ಎಲ್ಲರಿಗೂ ಮುಕ್ತ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದರು.

ಪ್ರಗತಿಪರ ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ, ಅನ್ಯ ಧರ್ಮಗಳ ಬಗ್ಗೆ ತಪ್ಪು ಕಲ್ಪನೆ ಹೊಂದಿರುವ ಕಟ್ಟಾ ಹಿಂದೂ ಮುಖಂಡರು ಮಸೀದಿಗೆ ಭೇಟಿ ನೀಡಿ ಶಾಂತಿಪ್ರಿಯ ಮುಸ್ಲಿಮರ ಇತಿಹಾಸ ತಿಳಿದುಕೊಳ್ಳಬೇಕು ಎಂದು ಹೇಳಿದರು.

Join Whatsapp
Exit mobile version