ಮಂಗಳೂರು: ಸುರತ್ಕಲ್ ಅಕ್ರಮ ಟೋಲ್’ಗೇಟ್ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದ್ದು, ಇವತ್ತು ಪ್ರತಿಭಟನಾಕಾರರು ಕಪ್ಪುಬಟ್ಟೆ ಧರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸರ್ಕಾರಿ ಕಾರ್ಯಕ್ರಮದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾವಳಿ ಜಿಲ್ಲೆಗೆ ಆಗಮಿಸಿದ್ದು, ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣಿಸಿದ್ದರು. ಟೋಲ್’ಗೇಟ್ ಪ್ರತಿಭಟನೆಗೆ ಭಯಪಟ್ಟು ಸಿಎಂ ಬೊಮ್ಮಾಯಿ ಅವರು ರಸ್ತೆ ಮಾರ್ಗವಾಗಿ ಹೋಗುವ ಬದಲು ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ ಎಂದು ಟೋಲ್’ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಸುರತ್ಕಲ್’ನಲ್ಲಿ ಅಕ್ರಮವಾಗಿ ಟೋಲ್’ಗೇಟ್ ನಿರ್ಮಿಸಲಾಗಿದೆ ಎಂದು ಆರೋಪಿಸಿ ಟೋಲ್’ಗೇಟ್ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದಿಗೆ 12ನೇ ದಿನಕ್ಕೆ ಕಾಲಿರಿಸಿದೆ. ಈ ಹೋರಾಟಕ್ಕೆ ಜಿಲ್ಲೆಯ ಪ್ರಮುಖ ಹೋರಾಟಗಾರರು ಬೆಂಬಲ ಸೂಚಿಸಿದ್ದು, ಎಮ್.ಎಲ್.ಸಿ ಬಿ.ಎಂ.ಫಾರೂಕ್ ಅವರು ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಸೋಮವಾರ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಧರಣಿಯಲ್ಲಿ ಭಾಗವಹಿಸಿ ಹೋರಾಟ ಸಮಿತಿಯ ಚಳವಳಿಗೆ ಬೆಂಬಲ ಸೂಚಿಸಿದರು.