ಕದನ ವಿರಾಮ ಉಲ್ಲಂಘಿಸಿರುವ ಇಸ್ರೇಲ್ ಗೆ ತಕ್ಕ ಉತ್ತರ ನೀಡಲಿದ್ದೇವೆ; ಹಮಾಸ್ ಎಚ್ಚರಿಕೆ
ಟೆಲ್ ಅವಿವ್: ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ 320ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜನವರಿಯಲ್ಲಿ ಕದನ ವಿರಾಮ ಜಾರಿಗೆ ಬಂದ ಬಳಿಕ ಹಮಾಸ್ ಗುರಿಯಾಗಿಸಿ ಇಸ್ರೇಲ್ ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ.
ಇಸ್ರೇಲ್ ನಡೆಸಿರುವ ದಾಳಿಯಲ್ಲಿ 320ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಕದನ ವಿರಾಮ ವಿಸ್ತರಣೆಯ ಮಾತುಕತೆಯಲ್ಲಿ ಉಂಟಾದ ಪ್ರಗತಿಯ ಹಿನ್ನಡೆಯಿಂದಾಗಿ ದಾಳಿಗೆ ಆದೇಶ ನೀಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರಣ ನೀಡಿದ್ದಾರೆ. ಕದನ ವಿರಾಮ ಉಲ್ಲಂಘನೆ ಮಾಡಿರುವ ಇಸ್ರೇಲ್ ಗೆ ತಕ್ಕ ಉತ್ತರ ನೀಡಲಿದ್ದೇವೆ. ಒತ್ತೆಯಾಳುಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿವೆ ಎಂದು ಹಮಾಸ್ ಎಚ್ಚರಿಸಿದೆ.
ಇಸ್ರೇಲ್ ನ ಈ ದಾಳಿಯಿಂದಾಗಿ ಯುದ್ಧ ಮತ್ತೆ ಪೂರ್ಣ ಪ್ರಮಾಣಕ್ಕೆ ಮರಳುವ ಭೀತಿಯನ್ನು ಹರಡಿದೆ.
ಗಾಜಾದ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಆಘಾತ ವ್ಯಕ್ತಪಡಿಸಿದ್ದು, ಕದನ ವಿರಾಮವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ.