ನವದೆಹಲಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿಗೆ ಸೇರಿದ ಗಾಯಕ ಸಿಧು ಮೂಸೇವಾಲ ಕೊಲೆಗಾರ ತಂಡದ ಪ್ರಮುಖ ಗೋಲ್ಡಿ ಬ್ರಾರ್ ಅಮೆರಿಕ ಸಂಯುಕ್ತ ಸಂಸ್ಥಾನದ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಆತನನ್ನು ಭಾರತಕ್ಕೆ ಕರೆ ತರಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ತಿಳಿಸಿದ್ದಾರೆ.
ಕೆನಡಾದಲ್ಲಿ ತಲೆ ಮರೆಸಿಕೊಂಡಿದ್ದ ಗೋಲ್ಡಿ ಬ್ರಾರ್ ಇತ್ತೀಚೆಗೆ ಅಮೆರಿಕಕ್ಕೆ ನೆಲೆ ಬದಲಿಸಿದ್ದ. ಬ್ರಾರ್ ನನ್ನು ಬಂಧಿಸಿರುವುದಾಗಿ ಕ್ಯಾಲಿಫೋರ್ನಿಯಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ನಲ್ಲಿ ಮೂಸೆವಾಲಾನನ್ನು ಮುಗಿಸಿದೆ ಎಂದು ಮೇ ತಿಂಗಳಲ್ಲಿ ಬರೆದುಕೊಂಡಿದ್ದ ಬ್ರಾರ್ ಇಲ್ಲಿ ಹುಡುಕಾಟ ಜೋರಾದಾಗ ಕೆನಡಾಕ್ಕೆ ಹಾರಿದ್ದ. ಅಲ್ಲೂ ಪೊಲೀಸರು ಬೆನ್ನಟ್ಟಿದಾಗ ಯುಎಸ್’ಎಗೆ ಹಾರಿ, ತಿಂಗಳೊಪ್ಪತ್ತಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸದ್ಯ ಗುಜರಾತಿನಲ್ಲಿ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಪತ್ರಿಕಾಗೋಷ್ಠಿಯಲ್ಲಿ “ಇಂದು ಬೆಳಿಗ್ಗೆ ಖಚಿತ ಸುದ್ದಿ ಸಿಕ್ಕಿದೆ. ಕೆನಡಾದಲ್ಲಿ ಕುಳಿತಿದ್ದ ದೊಡ್ಡ ಗ್ಯಾಂಗ್’ಸ್ಟರ್ ಕೊಲೆಗಾರ ಯುಎಸ್’ಎಯಲ್ಲಿ ಬಂಧಿಸಲ್ಪಟ್ಟಿದ್ದಾನೆ” ಎಂದರು.
ಇತ್ತೀಚೆಗೆ ಸಿಧು ಮೂಸೇವಾಲಾರ ತಂದೆಯು ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡುವವರಿಗೆ ಸರಕಾರವು ರೂ. 2 ಕೋಟಿ ಬಹುಮಾನ ಘೋಷಿಸುವಂತೆ ಕೇಳಿದ್ದರು.
ಸರಕಾರಕ್ಕೆ ಕೊಡಲು ಸಾಧ್ಯವಾಗದಿದ್ದರೆ ಬಹುಮಾನವನ್ನು ನನ್ನ ಕಿಸೆಯಿಂದಲೇ ನೀಡುವುದಾಗಿ ಅಮೃತಸರದಲ್ಲಿ ಮಾತನಾಡಿದ್ದ ಬಲ್ ಕೌರ್ ಸಿಂಗ್ ಹೇಳಿದ್ದರು.
ಪಂಜಾಬಿನ ಮುಕ್ತ್ ಸರ್ ಸಾಹಿಬ್ ನ ಗೋಲ್ಡಿ ಬ್ರಾರ್ 2017ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದ. ಕಳೆದ ತಿಂಗಳು ನಡೆದ ಡೇರಾ ಸಚ್ಛಾ ಸೌದಾ ಅನುಯಾಯಿಯ ಕೊಲೆಯ ಸಂಚುಗಾರ ಸಹ ಈ ಬ್ರಾರ್ ಎಂದು ಪೊಲೀಸರು ತಿಳಿಸಿದ್ದಾರೆ.
28ರ ಪ್ರಾಯದ ಶುಭದೀಪ್ ಸಿಂಗ್ ಸಿಧು ಗಾಯಕನಾಗಿ ಸಿಧು ಮೂಸೇವಾಲಾ ಎಂದೇ ಖ್ಯಾತರಾಗಿದ್ದರು. ಅವರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಸರಕಾರ ವಾಪಸು ಪಡೆದ ಬೆನ್ನಿಗೆಯೇ ಮೇ 29ರಂದು ಸಿಧು ಕೊಲೆಯಾಗಿತ್ತು.