ಹಾಸನ,ಆ.2; ಸುಮಾರು 39 ಮಂಗಗಳನ್ನು ಹತ್ಯೆಗೈದಿದ್ದ ಪ್ರಕರಣವನ್ನು ಭೇದಿಸಿರುವ ಹಾಸನ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಈ ಸಂಬಂಧವಾಗಿ ದಂಪತಿ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ತಾಲೂಕಿನ ಉಗನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು ಹಾಗೂ ಮಂಗಗಳನ್ನು ಸೆರೆಹಿಡಿದಿದ್ದ ಯಶೋಧ ಮತ್ತು ರಾಮು ದಂಪತಿಯನ್ನು ಬಂಧಿಸಿದ್ದಾರೆ.
ಉಗನೆ ಗ್ರಾಮದ ಜಮೀನಿನ ಮಾಲೀಕರಾದ ಪ್ರಸನ್ನ ಹಾಗೂ ರುದ್ರೇಗೌಡ ಬೆಳೆ ಹಾನಿ ಮಾಡುತ್ತಿವೆ ಎಂದು ಕೋತಿಗಳ ಸೆರೆಗೆ ಯಶೋಧ ಮತ್ತು ರಾಮು ದಂಪತಿಗೆ 40 ಸಾವಿರಕ್ಕೆ ಗುತ್ತಿಗೆ ನೀಡಿದ್ದರು. ಅದರಂತೆ ಆಹಾರ ನೀಡಿ ತೋರಿಸಿ ಜುಲೈ 28 ರಂದು 50 ಕ್ಕೂ ಹೆಚ್ಚು ಕೋತಿಗಳನ್ನು ಚೀಲದಲ್ಲಿ ಬಂಧಿಸಿಟ್ಟಿದ್ದ ಯಶೋಧ ಹಾಗೂ ರಾಮು ಅವುಗಳನ್ನು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.
ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 39 ಕೋತಿಗಳನ್ನು ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಮನವಿ ಮಾಡಿದ್ದ ಜಮೀನಿನ ಮಾಲೀಕರು, ಕೋತಿ ಸೆರೆಹಿಡಿದ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಳೆಯೇ ಹೈಕೋರ್ಟ್ ಗೆ ವರದಿ ನೀಡಬೇಕಿದ್ದ ಹಿನ್ನೆಲೆಯಲ್ಲಿ ತ್ವರಿತ ತನಿಖೆ ನಡೆಸಿದ್ದ ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮುಂದಾಗಿದ್ದಾರೆ