Home ಕರಾವಳಿ ಕ್ಷೇತ್ರಾದ್ಯಂತ ಕೊರೋನಾ ಕೇರ್ ಸೆಂಟರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಮೊಯಿದಿನ್ ಬಾವಾ

ಕ್ಷೇತ್ರಾದ್ಯಂತ ಕೊರೋನಾ ಕೇರ್ ಸೆಂಟರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಮೊಯಿದಿನ್ ಬಾವಾ

ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯಿದಿನ್ ಬಾವಾ ಅವರು ಏಕಕಾಲದಲ್ಲಿ ತಮ್ಮ ಕ್ಷೇತ್ರಾದ್ಯಂತ ಏಳು ಕಡೆಗಳಲ್ಲಿ ಕೊರೊನಾ ಕೇರ್ ಸೆಂಟರ್ ಅನ್ನು ಸೋಮವಾರ ಬೆಳಗ್ಗೆ ಲೋಕಾರ್ಪಣೆಗೊಳಿಸಿದ್ದಾರೆ.

ಎಜೆ ಆಸ್ಪತ್ರೆಯ ಕಾರ್ಡಿಯೋಲಾಜಿಸ್ಟ್ ಡಾ. ಬಿ.ವಿ. ಮಂಜುನಾಥ್ ಅವರು ಉದ್ಘಾಟನೆ ನೆರವೇರಿಸಿ ಬಳಿಕ ಮಾತಾಡಿದ ಅವರು, “ಕೊರೊನಾ ಎರಡನೇ ಅಲೆ ದೇಶದಲ್ಲಿ ಪ್ರಬಲ ಪರಿಣಾಮವನ್ನು ಬೀರುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಜನರು ಈ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಜನರಿಗೆ ತುರ್ತು ಸಂದರ್ಭದಲ್ಲಿ ಅವಶ್ಯಕತೆ ಇರುವ ಆಕ್ಸಿಜನ್, ಬೆಡ್ ಸಹಿತ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಲು ಮೊಯಿದಿನ್ ಬಾವಾ ಅವರು ಕೈಗೊಂಡ ಕ್ರಮ ಶ್ಲಾಘನೀಯ. ಮನೆಗಳಲ್ಲಿ ಒಬ್ಬರಿಗೆ ಕೊರೊನಾ ಬಂದರೆ ಅದು ಇತರರಿಗೂ ಹರಡುವ ಸಾಧ್ಯತೆ ಇದ್ದು ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಕೆಲಸವನ್ನು ಇಂತಹ ಕೊರೊನಾ ಕೇರ್ ಸೆಂಟರ್ ಮಾಡುತ್ತಿದೆ” ಎಂದರು.

ಮೊಯಿದಿನ್ ಬಾವಾ ಮಾತನಾಡಿ, “ಕೊರೊನಾ ಕೇರ್ ಸೆಂಟರ್ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ನನ್ನ ಸಣ್ಣ ಪ್ರಯತ್ನ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬೇಡಿ. ಇಲ್ಲಿ ಯಾವುದೇ ಜಾತಿ ಧರ್ಮದ ವಿಚಾರಕ್ಕೆ ಅವಕಾಶವಿಲ್ಲ. ನನ್ನ ಕ್ಷೇತ್ರದ ಏಳು ಕಡೆಗಳಲ್ಲಿ ಸ್ಥಳೀಯ ಮಸೀದಿ, ಕಮ್ಯುನಿಟಿ ಹಾಲ್, ಸಂಘ ಸಂಸ್ಥೆಗಳು ನೀಡಿದ ಸ್ಥಳದಾನದಲ್ಲಿ ನನ್ನ ವೈಯಕ್ತಿಕ ಖರ್ಚಿನಿಂದ ಬೆಡ್, ಆಕ್ಸಿಜನ್, ವೈದ್ಯರು, ನರ್ಸ್, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲವನ್ನೂ ಒದಗಿಸಿದ್ದೇನೆ. ಇಲ್ಲಿ ಬರುವ ಜನರು ಶೀಘ್ರ ಗುಣಮುಖರಾಗಿ ತಂತಮ್ಮ ಮನೆಗಳಿಗೆ ತೆರಳುವಂತಾದರೆ ನನ್ನ ಶ್ರಮ ಸಾರ್ಥಕ. ಸಮಾಜಸೇವೆ ಮಾಡಲು ಅಧಿಕಾರ ಬೇಕೆಂದಿಲ್ಲ. ಹಿಂದಿನಿಂದಲೂ ಜನರ ಸೇವೆಗಾಗಿ ನಾನಿದ್ದೇನೆ. ಕೊರೊನಾ ಕೇರ್ ಸೆಂಟರ್ ನಲ್ಲಿ ನುರಿತ ವೈದ್ಯಕೀಯ ಸೌಲಭ್ಯವಿದ್ದು ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಬರಲು ವಾರಿಯರ್ಸ್ ನೇಮಿಸಿದ್ದೇನೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದಿದ್ದಾರೆ.

ಕಾಟಿಪಳ್ಳ ಬದ್ರಿಯಾ ಜುಮಾ ಮಸೀದಿ, ಬೈಕಂಪಾಡಿ ಅಡ್ಕ ಕಮ್ಯುನಿಟಿ ಹಾಲ್, ಬರಾಕ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರ್, ಜೋಕಿಮ್ಸ್ ಸ್ಕೂಲ್ ನೀರ್ ಮಾರ್ಗ, ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು, ಬಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗುರುಪುರ, ಬಾಜಿ ಮಂಜಿಲ್ ಜೆಎಂ ರೋಡ್ ಗಂಜೀಮಠ ಇತ್ಯಾದಿ ಕಡೆಗಳಲ್ಲಿ ಕೊರೊನಾ ಕೇರ್ ಸೆಂಟರ್ ಆರಂಭಗೊಂಡಿದೆ.

ಈ ವೇಳೆ ಕಾಟಿಪಳ್ಳ ಜಮಾತ್ ಅಧ್ಯಕ್ಷ ಅಹಮದ್ ಬಾವ, ಸೈಫುಲ್ಲಾ, ಬಶೀರ್ ಅಹಮದ್, ಅಯ್ಯೂಬ್, ಕಾಟಿಪಳ್ಳ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಹಾರಿಸ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version