Home ಟಾಪ್ ಸುದ್ದಿಗಳು ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿ ಕಾಂಗ್ರೆಸ್ ದೂರುವ ಬಿಜೆಪಿಗೆ ಈಶ್ವರ ಖಂಡ್ರೆ 10 ಪ್ರಶ್ನೆ

ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿ ಕಾಂಗ್ರೆಸ್ ದೂರುವ ಬಿಜೆಪಿಗೆ ಈಶ್ವರ ಖಂಡ್ರೆ 10 ಪ್ರಶ್ನೆ

ಬೆಂಗಳೂರು : ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಎಂಬ ಗಾದೆಯಂತೆ, ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ, ಸಾವಿರಾರು ಮುಗ್ಧ ಜನರ ಸಾವಿಗೆ ಕಾರಣವಾದ ಬಿಜೆಪಿ ಈಗ ಕಾಂಗ್ರೆಸ್ ಜನರ ತೆರಿಗೆ ಹಣವನ್ನು ವಿವೇಚನೆಯಿಂದ ವೆಚ್ಚ ಮಾಡಿದ್ದರೆ ಕೊರೊನಾ ನಿಯಂತ್ರಿಸಬಹುದಾಗಿತ್ತು ಎಂದು ಆರೋಪಿಸುತ್ತಿರುವುದು ಅರ್ಥ ಹೀನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾಗಳ ಬೇಜವಾಬ್ದಾರಿತನ, ಹೊಣೆಗೇಡಿ, ತಿಳಿಗೇಡಿತನದ ಆಡಳಿತದ ಲೋಪ ಮರೆ ಮಾಚಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಂಗ್ರೆಸ್ ಮೇಲೆ ಆರೋಪ ಮಾಡುವುದು ಅವರ ಬಾಲಿಶನತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ತಿರುಗೇಟು ನೀಡಿರುವ ಈಶ್ವರ ಖಂಡ್ರೆ, ಸರ್ಕಾರದ ಲೋಪಗಳನ್ನು ಪಟ್ಟಿ ಮಾಡಿ 10 ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರದಿಂದ ಉತ್ತರಕ್ಕೆ ಒತ್ತಾಯಿಸಿದ್ದಾರೆ.

1. ಕೋವಿಡ್ 2ನೇ ಅಲೆಯ ಭೀತಿಯಿಂದ ಮಾರ್ಚ್ ತಿಂಗಳಲ್ಲಿ ನೆರೆಯ ತೆಲಂಗಾಣ ಸೇರಿ 10 ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ –ಕಾಲೇಜುಗಳನ್ನು ಬಂದ್ ಮಾಡಲಾಯಿತು. ಕರ್ನಾಟಕ ಸರ್ಕಾರವೇ ಕೋವಿಡ್ ಕುರಿತಂತೆ ರೂಪಿಸಿದ್ದ ತಜ್ಞರ ಸಮಿತಿ ಸಹ ಮಾರ್ಚ್ ನಲ್ಲೇ ಶಾಲೆ –ಕಾಲೇಜು ಕೊರೊನಾ ಹಾಟ್ ಸ್ಪಾಟ್ ಆಗಲಿವೆ ಎಂದು ಮುನ್ನೆಚ್ಚರಿಕೆ ನೀಡಿದರೂ ಕಡೆಗಣಿಸಿ ವಿದ್ಯಾಗಮ, ಬೌದ್ಧಿಕ ತರಗತಿ ನಡೆಸಿದ ಪರಿಣಾಮ ಹಾಗೂ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 600ಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ಕೊರೊನಾ ಜೊತೆ ಬದುಕಲು ಕಲಿಯಬೇಕು ಎಂದು ಹೇಳುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಸಾವಿನ ಹೊಣೆ ಹೊರುತ್ತಾರೆಯೇ? ಅಥವಾ ತಜ್ಞರ ವರದಿ ಕಡೆಗಣಿಸಿ ರಾಜ್ಯದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಸರ್ಕಾರ ಹೊಣೆ ಹೊರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

2. ಕಳೆದ ಮಾರ್ಚ್ ಆರಂಭದಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳವಾಗಿದೆ, ಕೂಡಲೇ ಗಡಿಗಳನ್ನು ಬಂದ್ ಮಾಡಿ, ಆರ್.ಟಿ.ಪಿ.ಸಿ.ಆರ್, ರಾಪಿಡ್ ಆಂಟಿಜನ್ ಟೆಸ್ಟ್ ಹೆಚ್ಚಳ ಮಾಡಿ ಎಂದು ಒತ್ತಾಯಿಸಿದರೂ ನಿರ್ಲಕ್ಷಿಸಿ ಉಪ ಚುನಾವಣೆ ಆಗುವ ತನಕ ರಾಜ್ಯದ ಹಿತ ಮರೆತ ಸರ್ಕಾರ ಕೋವಿಡ್ 2ನೇ ಅಲೆ ಹೆಚ್ಚಳಕ್ಕೆ ಕಾರಣವಲ್ಲವೇ. ಇದಕ್ಕೆ ಯಾರು ಉತ್ತರ ನೀಡುತ್ತಾರೆ. ಈ ಅಪರಾಧಿಕ ನಿರ್ಲಕ್ಷ್ಯದ ಹೊಣೆ ಯಾರು ಹೊರುತ್ತಾರೆ? ಎಂದು ಕೇಳಿದ್ದಾರೆ.

3. ಮಾರ್ಚ್ ಮಧ್ಯ ಭಾಗದಲ್ಲಿ ಸತತವಾಗಿ ನಿತ್ಯ ರಾಜ್ಯದಲ್ಲಿ 1000 ಕೊರೊನಾ ಪ್ರಕರಣ ಬಂದಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ನೆರೆ ರಾಜ್ಯದೊಂದಿಗೆ ನಮ್ಮನ್ನು ಹೋಲಿಸಬೇಡಿ, ಎಲ್ಲ ಸರಿ ಇದೆ ಎಂದು ಜನರಲ್ಲಿ ಭ್ರಮ ಹುಟ್ಟಿಸಿ, ಲಕ್ಷ ಲಕ್ಷ ಜನರನ್ನು ಸೇರಿಸಿ ಚುನಾವಣಾ ಪ್ರಚಾರ ಸಭೆ ನಡೆಸಿ, ಜಾತ್ರೆ, ಉತ್ಸವ, ಸಿನಿಮಾ, ಸಂತೆಗೆ ಅವಕಾಶ ಮಾಡಿಕೊಟ್ಟು ರಾಜ್ಯಾದ್ಯಂತ ಸೋಂಕು ಹೆಚ್ಚಳಕ್ಕೆ ಕಾರಣವಾದ, ಆಡಳಿತ ಮರೆತು ರಾಜಕೀಯವನ್ನೇ ದೊಡ್ಡದೆಂದು ಪರಿಭಾವಿಸಿದ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಹೊಣೆಯನ್ನು ಯಾರು ಹೊರುತ್ತಾರೆ ತಿಳಿಸಿ ಎಂದು ಒತ್ತಾಯಿಸಿದ್ದಾರೆ.

4. ಚಿತ್ರ ಮಂದಿರಗಳಲ್ಲಿ ಒಟ್ಟು ಆಸನದ ಶೇಕಡ 50ರಷ್ಟು ಮಾತ್ರ ಪ್ರವೇಶಕ್ಕೆ ಮಾತ್ರ ಅವಕಾಶ ಎಂದು ಬೆಳಗ್ಗೆ ಆದೇಶ ಹೊರಡಿಸಿ, ಸಂಜೆ ಬದಲಾವಣೆ ಮಾಡಿ ಆಡಳಿತವನ್ನೇ ನಗೆಪಾಟಲಿಗೆ ಈಡು ಮಾಡಿದ ಸರ್ಕಾರದ ಹೊಣೆಗೇಡಿತನಕ್ಕೆ ಯಾರನ್ನು ಗುರಿ ಮಾಡುತ್ತೀರೀ? ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣವಲ್ಲವೆ ಎಂದು ಕೇಳಿದ್ದಾರೆ.

5. ಕಳೆದ 6 ತಿಂಗಳಿಂದಲೂ ತಜ್ಞರ ಸಮಿತಿ ಮಾರ್ಚ್ ಅಂತ್ಯದಲ್ಲಿ 2ನೇ ಕೊರೊನಾ ಅಲೆ ಸ್ಫೋಟಗೊಳ್ಳುತ್ತದೆ ಎಂಬ ಎಚ್ಚರಿಕೆ ನೀಡಿದ್ದರೂ, ವೈದ್ಯಕೀಯ ಮೂಲಸೌಕರ್ಯವರ್ಧನೆಗೆ ಗಮನ ಹರಿಸದೆ, ಆಕ್ಸಿಜನ್ ಉತ್ಪಾದನೆಗೆ ಅವಕಾಶವಿದ್ದರೂ ಕ್ರಮ ಕೈಗೊಳ್ಳದೆ, ಅಗತ್ಯ ಪ್ರಮಾಣದ ರೆಮಿಡಿ ಸಿವೀರ್ ಚುಚ್ಚುಮದ್ದು ದಾಸ್ತಾನು ಮಾಡಿಟ್ಟುಕೊಳ್ಳದೆ, ವೆಂಟಿಲೇಟರ್, ಆಕ್ಸಿಜನ್ ಹಾಸಿಗೆಗಳ ನಿರ್ವಹಣೆಗೆ ವೈದ್ಯ ಸಿಬ್ಬಂದಿಗೆ ತರಬೇತಿ ಕೊಡಿಸದೆ ನಿದ್ರಾವಸ್ಥೆಯಲ್ಲಿದ್ದ ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಯಾರು ಜವಾಬ್ದಾರಿ ಹೊರುತ್ತಾರೆ? ತಿಳಿಸಿ ಎಂದು ಆಗ್ರಹಿಸಿದ್ದಾರೆ.

6. ರಾಜ್ಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಮಾಡಲಾರದೆ ಕೈಚೆಲ್ಲಿ ಕುಳಿತ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡದೆ, ಆಕ್ಸಿಜನ್, ವೆಂಟಿಲೇಟರ್ ಮತ್ತು ವೈದ್ಯ ಹಾಗೂ ಅರೆವೈದ್ಯ ಸಿಬ್ಬಂದಿಯ ಕೊರತೆ ನಿವಾರಿಸಲು ಯಾವುದೇ ಕ್ರಮ ಕೈಗೊಳ್ಳದೆ, ಆಸ್ಪತ್ರೆಗಳ ಡಿ ದರ್ಜೆ ನೌಕರರಿಗೆ ತಿಂಗಳುಗಟ್ಟಲೆ ಸಂಬಳ ನೀಡದೆ ರಾಜ್ಯದ ಪರಿಸ್ಥಿತಿ ಶೋಚನೀಯವಾಗಲು ಕಾರಣವಾರುವ ಸರ್ಕಾರದ ನಿಷ್ಕ್ರಿಯತೆಗೆ ಯಾರನ್ನು ಹೊಣೆ ಮಾಡುತ್ತೀರಿ? ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ.

7. ರಾಜ್ಯದ ಜನರು ಆಕ್ಸಿಜನ್ ಇಲ್ಲದೆ ಹಾದಿ ಬೀದಿಯಲ್ಲಿ ಸಾಯುತ್ತಿದ್ದರೂ, ರಾಜ್ಯದಲ್ಲೇ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೆ ಕೊಡಿ ಎಂದು ಕೇಳುವ ಧೈರ್ಯ ಇಲ್ಲದೆ 25 ಸಂಸತ್ ಸದಸ್ಯರು, ಸರ್ಕಾರದ ಗುಲಾಮಗಿರಿತನಕ್ಕೆ ಯಾರನ್ನು ಹೊಣೆ ಮಾಡುತ್ತೀರಿ ಇದು ಸರ್ಕಾರದ ಕರ್ತವ್ಯ ಲೋಪ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

8. ಕರ್ನಾಟಕ ಹೈಕೋರ್ಟ್ ರಾಜ್ಯಕ್ಕೆ 1200 ಎಂ.ಟಿ. ಆಮ್ಲಜನಕ ನೀಡಬೇಕು ಎಂದು ತೀರ್ಪು ನೀಡಿದರೂ, ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವ ಕೇಂದ್ರ ಸರ್ಕಾರದ ವಿರುದ್ಧ ಚಕಾರವೆತ್ತದೆ, ಕನಿಷ್ಠ ಸರ್ಕಾರದ ನಿಲುವನ್ನೂ ಬಹಿರಂಗಪಡಿಸದೆ, ರಾಜ್ಯದ ಜನರಿಗೆ, ರಾಜ್ಯಕ್ಕೆ ದ್ರೋಹ ಮಾಡಿದ ಸರ್ಕಾರ ಮತ್ತು ಸಂಸತ್ ಸದಸ್ಯರ ನಿರ್ಲಜ್ಜತನ, ಹೇಡಿತನಕ್ಕೆ ಯಾರನ್ನು ಹೊಣೆ ಮಾಡುತ್ತೀರಿ? ಎಂದು ಕೇಳಿದ್ದಾರೆ.

9. ಎಲ್ಲ ರಾಜ್ಯದಲ್ಲೂ ಲಸಿಕೆ ಅಭಿಯಾನ ನಡೆಯುತ್ತಿದ್ದರೂ, ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸೂಕ್ತ ಕ್ರಮ ವಹಿಸದೆ, ಲಸಿಕೆ ಖರೀದಿಗೆ ಮುಂದಾಗದೆ, ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ಗ್ಲೋಬಲ್ ಟೆಂಡರ್ ಮಾತನಾಡಿ ಜನರನ್ನು ಮರುಳು ಮಾಡಲು ಯತ್ನಿಸುತ್ತಿರುವ ಸರ್ಕಾರದ ವಂಚಕ ಬುದ್ಧಿಗೆ ಯಾರನ್ನು ಹೊಣೆ ಮಾಡುತ್ತೀರಿ? ನೀವೇ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.

10. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸದೆ, ಜನರು ಒಂದೇ ಆಟೋದಲ್ಲಿ 6-7 ಜನ, ಒಂದು ಖಾಸಗಿ ಬಸ್ ನಲ್ಲಿ 100ಕ್ಕೂ ಹೆಚ್ಚು ಜನ ಒಂದೇ ಬಾರಿ ಓಡಾಡುವುದು ಅನಿವಾರ್ಯ ಆಗುವಂತೆ ಮಾಡಿ ವ್ಯಕ್ತಿಗತ ಅಂತರ ಇಲ್ಲದೆ ಸೋಂಕು ಹರಡಲು ಕಾರಣವಾಗಿದ್ದಕ್ಕೆ ಸಾರಿಗೆ ಸಚಿವರನ್ನು ಹೊಣೆ ಮಾಡುತ್ತೀರೋ, ಸರ್ಕಾರವನ್ನು ಹೊಣೆ ಮಾಡುತ್ತೀರೋ ಎಂದು ಕೇಳಿರುವ ಈಶ್ವರ ಖಂಡ್ರೆ, ಇಂತಹ ಕೀಳು ರಾಜಕೀಯ ಬಿಟ್ಟು, ರಾಜ್ಯದ ಜನರ ಪ್ರಾಣ ರಕ್ಷಣೆಗೆ ಮುಂದಾಗುವಂತೆ, 3ನೇ ಅಲೆಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

Join Whatsapp
Exit mobile version