Home ಟಾಪ್ ಸುದ್ದಿಗಳು ಮೋಹನ್ ಭಾಗವತ್ INDIA ಮೈತ್ರಿಕೂಟವನ್ನು ಬೆಂಬಲಿಸಬೇಕು: ಸಂಜಯ್ ರಾವುತ್

ಮೋಹನ್ ಭಾಗವತ್ INDIA ಮೈತ್ರಿಕೂಟವನ್ನು ಬೆಂಬಲಿಸಬೇಕು: ಸಂಜಯ್ ರಾವುತ್

ಮುಂಬೈ: ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ INDIA ಮೈತ್ರಿಕೂಟವನ್ನು ಬೆಂಬಲಿಸಬೇಕು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಮೋಹನ್ ಭಾಗವತ್ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡಬೇಕು ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ವಿಜಯದಶಮಿ ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ ರಾವುತ್ ಹೀಗೆ ಹೇಳಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಕೆಲವು ಜನರಿದ್ದಾರೆ. ಅವರು ಭಾರತವು ಅಭಿವೃದ್ಧಿಯಾಗಲಿ ಎಂದು ಬಯಸುವುದಿಲ್ಲ. ಅವರು ಸಮಾಜದಲ್ಲಿ ಬಣಗಳನ್ನು ಮತ್ತು ಘರ್ಷಣೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾವುತ್, ಮೋಹನ್ ಭಾಗವತ್ ಅವರು ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡಿದ್ದರೆ, ದೇಶದ ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಸೇರುವ ಮೊದಲ ವ್ಯಕ್ತಿ ಅವರೇ ಆಗಿರಬೇಕು ಎಂದಿದ್ದಾರೆ.

ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಜನರು ಇಂಡಿಯಾ ಮೈತ್ರಿಕೂಟಕ್ಕೆ ಬಂದಿದ್ದಾರೆ. ಅವರು ಸರ್ವಾಧಿಕಾರದ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಮೋಹನ್ ಭಾಗವತ್ ಅವರು ದೇಶ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಸಂಘದ ನಾಯಕರು ಜೈಲಿನಲ್ಲಿದ್ದರು. ಭಿನ್ನಾಭಿಪ್ರಾಯಗಳು ಇದ್ದವರು ಜೈಲಿನಲ್ಲಿದ್ದರು ಮತ್ತು ನಂತರ ಅವರೆಲ್ಲಾ ಭಾರತೀಯ ಜನತಾ ಪಕ್ಷದೊಂದಿಗೆ ಸೇರಿ ಜನತಾ ಪಕ್ಷವನ್ನು ಸ್ಥಾಪಿಸಿದರು ಮತ್ತು ಸರ್ವಾಧಿಕಾರವನ್ನು ಕೊನೆಗೊಳಿಸಿದರು. ಹಾಗೆಯೇ ಪ್ರಸ್ತುತ ಸರ್ವಾಧಿಕಾರವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಉಳಿಸಲು ಭಾಗವತ್ ನಮ್ಮನ್ನು ಬೆಂಬಲಿಸಲಿ ಎಂದಿದ್ದಾರೆ.

ಇಂಡಿಯಾ ಮೈತ್ರಿಕೂಟವು 28 ರಾಜಕೀಯ ಪಕ್ಷಗಳನ್ನು ಒಳಗೊಂಡಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವ ಗುರಿಯನ್ನು ಹೊಂದಿದೆ.

Join Whatsapp
Exit mobile version