ಆಗ್ರಾ: ಬೀದಿನಾಯಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಎರಡು ವಾರಗಳ ಹಿಂದೆ ಬಾಲಕಿಯ ಮೇಲೆ ನಾಯಿಗಳು ಭೀಕರವಾಗಿ ದಾಳಿ ಮಾಡಿತ್ತು.
ಬಾಲಕಿಯ ತಾಯಿ ಆಯಂಟಿ ರೇಬೀಸ್ ಲಸಿಕೆ(ಎಆರ್ವಿ) ಕೊಡಿಸದೇ ಮನೆಮದ್ದುಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಬಾಲಕಿಯನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಎಸ್ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ನಮ್ಮ ಸಲಹೆಯನ್ನು ಆಕೆಯ ಕುಟುಂಬ ಆರಂಭದಲ್ಲಿ ನಿರ್ಲಕ್ಷಿಸಿತು. ಬಾಲಕಿಯ ಸ್ಥಿತಿ ಗಂಭೀರವಾದ ನಂತರ ಎಸ್ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಬಾಹ್ ಬ್ಲಾಕ್ ಸಮುದಾಯ ಆರೋಗ್ಯ ಕೇಂದ್ರದ(ಸಿಎಚ್ಸಿ) ಮುಖ್ಯಸ್ಥ ಡಾ. ಜಿತೇಂದ್ರ ವರ್ಮಾ ತಿಳಿಸಿದ್ದಾರೆ.
ಸುಮಾರು 10-15 ದಿನಗಳ ಹಿಂದೆ ಬಾಲಕಿಗೆ ಬೀದಿ ನಾಯಿಯೊಂದು ಕಚ್ಚಿದೆ. ಬಾಲಕಿ ತನ್ನ ತಾಯಿಯನ್ನು ಹೊರತುಪಡಿಸಿ ತನ್ನ ಕುಟುಂಬದ ಇತರ ಯಾರಿಗೂ ಘಟನೆಯ ಬಗ್ಗೆ ತಿಳಿಸಿಲ್ಲ. ತಾಯಿ ಮನೆಮದ್ದುಗಳನ್ನು ಮಾತ್ರ ನೀಡಿದ್ದಾರೆ. ಆದರೆ ಬಾಲಕಿಯ ಸ್ಥಿತಿ ಹದಗೆಟ್ಟಾಗ ಶನಿವಾರ ನಮ್ಮ ಬಳಿ ಕರೆತಂದರು ಎಂದು ಡಾ. ಜಿತೇಂದ್ರ ಹೇಳಿದ್ದಾರೆ.
ಬೀದಿ ನಾಯಿಗಳ ದಾಳಿಗೆ ಸಿಲುಕಿ ಅತಿ ಶ್ರೀಮಂತ ಉದ್ಯಮಿಯೊಬ್ಬರು ಮೃತ್ಯುವಾದ ಸುದ್ದಿಯ ಬೆನ್ನಿಗೇ ಮತ್ತೊಂದು ನಾಯಿ ದಾಳಿ ವರದಿಯಾಗಿದೆ. ಕೇರಳ ರಾಜ್ಯವೊಂದರಲ್ಲೇ 5 ವರ್ಷದಲ್ಲಿ 35,724 ಬೀದಿನಾಯಿ ದಾಳಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದ್ದು, ಬೀದಿ ನಾಯಿಗಳ ಬಗ್ಗೆ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ.