ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಪಶುವಿನ ಚಿಕಿತ್ಸೆಗೆ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಪಶು ವೈದ್ಯರು, ತಜ್ಞ ಸಿಬ್ಬಂದಿ, ಉಪಕರಣ, ಔಷಧಿಯನ್ನು ಹೊತ್ತ ಸಂಚಾರಿ ಚಿಕಿತ್ಸಾಲಯವೇ ಮನೆ ಬಾಗಿಲಿಗೆ ಬರಲಿದೆ.
ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ನೆರವಿನಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳ ಸೇವೆ ಒದಗಿಸಲಾಗುತ್ತಿದೆ. ₹ 44 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ 275 ಸಂಚಾರ ಪಶು ಚಿಕಿತ್ಸಾಲಯಗಳನ್ನು ಸೇವೆಗೆ ಒದಗಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ 70 ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಶನಿವಾರ ಚಾಲನೆ ನೀಡಲಾಯಿತು.
ವಿಧಾನಸೌಧದ ಮುಂಭಾಗ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲಾ, ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಚಾಲನೆ ನೀಡಿದರು.