Home ಟಾಪ್ ಸುದ್ದಿಗಳು ಶಾಸಕ ಯಶ್ಪಾಲ್ ಸುವರ್ಣ ಪುಂಡಾಟಿಕೆ ನಿಲ್ಲಿಸಿ, ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಿ: ರಮೇಶ್ ಕಾಂಚನ್

ಶಾಸಕ ಯಶ್ಪಾಲ್ ಸುವರ್ಣ ಪುಂಡಾಟಿಕೆ ನಿಲ್ಲಿಸಿ, ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಿ: ರಮೇಶ್ ಕಾಂಚನ್

ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಭೂಮಿ ವಿವಾದ ವಿಚಾರದಲ್ಲಿ ಪ್ರತಿಭಟನೆ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದಲ್ಲಿ ಪೊಲೀಸರೊಂದಿಗೆ ತಳ್ಳಾಟ ನೂಕಾಟ ನಡೆಸಿ ಅಸಭ್ಯವಾಗಿ ವರ್ತಿಸಿರುವುದು ಶಾಸಕ ಸ್ಥಾನಕ್ಕೆ ಮಾಡಿರುವ ಅಪಮಾನ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕನ್ನು ನೀಡಿದ್ದು ಕಾನೂನು ಚೌಕಟ್ಟಿನಡಿಯಲ್ಲಿ ಪ್ರತಿಭಟನೆ ನಡೆಸಬೇಕೇ ಹೊರತು ಪ್ರತಿಭಟನೆಯ ಹೆಸರಿನಲ್ಲಿ ಪುಂಡಾಟಿಕೆ ಮೆರೆಯುವುದು ಶಾಸಕರಿಗೆ ಶೋಭೆ ತರುವಂತಹ ವಿಚಾರವಲ್ಲ. ಪ್ರತಿ ಬಾರಿ ಒಂದಲ್ಲ ಒಂದು ವಿಚಾರದಲ್ಲಿ ಪುಂಡಾಟ ಮೆರೆಯುವ ಶಾಸಕರು ತಮ್ಮ ಸ್ಥಾನದ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.


ಶಾಸಕರು ತಮ್ಮ ಅಸಭ್ಯ ವರ್ತನೆಗಳ ಮೂಲಕ ಜಿಲ್ಲೆಯ ಮಾನವನ್ನು ಹರಾಜು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲಾಧಿಕಾರಿಗಳ ಕಛೇರಿಗೆ ನುಗ್ಗುವ ಪ್ರಯತ್ನ ಮಾಡಿದ್ದಲ್ಲದೆ ಪೊಲೀಸರೊಂದಿಗೆ ತಳ್ಳಾಟ ನಡೆಸಿರುವುದು ಮೂರ್ಖತನದ ಪರಮಾವಧಿಯಾಗಿದೆ. ಇವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ ಕ್ಷೇತ್ರದ ಜನತೆ ಇಂದು ಪರಿತಪಿಸುತ್ತಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ದಮ್ಮು ತಾಕತ್ತು ಇದ್ದರೆ ಮೊದಲು ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version