Home ಕರಾವಳಿ ಬೀಫ್ ಸ್ಟಾಲ್ ವಿರುದ್ಧ ಮಾತನಾಡುವ ಶಾಸಕ ಕಾಮತ್ ಮೊದಲು ಬಿಜೆಪಿಯವರ ಬೀಫ್ ರಫ್ತು ಪ್ಲಾಂಟ್ ತಡೆಯಲಿ:...

ಬೀಫ್ ಸ್ಟಾಲ್ ವಿರುದ್ಧ ಮಾತನಾಡುವ ಶಾಸಕ ಕಾಮತ್ ಮೊದಲು ಬಿಜೆಪಿಯವರ ಬೀಫ್ ರಫ್ತು ಪ್ಲಾಂಟ್ ತಡೆಯಲಿ: ಕೆ.ಅಶ್ರಫ್ ಸವಾಲು

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ನೂತನ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಸಂಕೀರ್ಣದ ಬೀಫ್ ಸ್ಟಾಲ್ ವಿರುದ್ಧ ಮಾತನಾಡುವ ಮೊದಲು ಅದಾನಿ, ಅಂಬಾನಿ, ರಾಜೀವ್ ಚಂದ್ರಶೇಖರ್ ಒಡೆತನದ ಪ್ಯಾಕೇಜ್ ಡ್ ಬಫೆಲ್ಲೋ ಮೀಟ್ ಎಂಬ ಸಂಸ್ಕರಿತ ಬೀಫ್ ಕುರಿತು ಮಾತನಾಡಿ, ಅಂತಹ ಬೀಫ್ ಪ್ಲಾಂಟ್ ತಡೆಯಲು ಪ್ರಯತ್ನಿಸಲಿ ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಸವಾಲು ಹಾಕಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಸಕರಿಗೆ ಪ್ರಸ್ತುತ ಮಾತನಾಡಲು ಯಾವುದೇ ವಿಷಯವಿಲ್ಲ. ಅಭಿವೃದ್ಧಿ ವಿಷಯದಲ್ಲಿ ಅವರ ಕೊಡುಗೆ ಶೂನ್ಯ. ಹಾಗಾಗಿ ಬೀಫ್ ಸ್ಟಾಲ್ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ.


ಪ್ರಸ್ತುತ ಮಂಗಳೂರು ಸ್ಮಾರ್ಟ್ ಸಿಟಿಯ ಭಾಗವಾಗಿ ಖಾಸಗಿ ಸಹಭಾಗಿತ್ವದಲ್ಲಿ ಸೆಂಟ್ರಲ್ ಮಾರ್ಕೆಟ್ ಸಂಕೀರ್ಣ ನಿರ್ಮಾಣವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಸಭೆಯು ಪ್ರತೀ ತಿಂಗಳು ಶಾಸಕರು, ಸಂಸದರು, ಕಾರ್ಪೊರೇಟರ್ ಗಳ ಹಾಜರಾತಿಯಲ್ಲಿ ನಡೆಯುತ್ತಿದೆ. ಸಂಕೀರ್ಣದ ವಿನ್ಯಾಸದಲ್ಲಿ ಅಗತ್ಯ ಸ್ಟಾಲ್ ಗಳ ವಿಷಯ ಅದೆಷ್ಟೋ ಬಾರಿ ಪ್ರಸ್ತಾಪ ಆಗಿ ಸ್ಟಾಲ್ ಗಳ ನಿರ್ಮಾಣ ರಚನೆ ಆಗುತ್ತಿದೆ. ಪ್ರಸ್ತುತ ಶಾಸಕರು ಮೊಸಳೆ ಕಣ್ಣೀರು ಸುರಿಸುತ್ತಿದ್ದು ಮಂಗಳೂರಿನ ಪ್ರಜೆಗಳನ್ನು ಮೂರ್ಖರನ್ನಾಗಿ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಬೀಫ್ ಸ್ಟಾಲ್ ವಿವಾದ ಎಂಬುದು ಮುಂಬರುವ ವಿಧಾನ ಸಭಾ ಚುನಾವಣೆಗೆ ಬಿ.ಜೆ.ಪಿ ತಯಾರು ಮಾಡಿದ ತುರ್ತು ಅಜೆಂಡಾವಾಗಿದೆ. ಆ ಮೂಲಕ ಜಿಲ್ಲೆಯ ಜನರನ್ನು ಧರ್ಮ, ನಂಬಿಕೆಯ ಆಧಾರದಲ್ಲಿ ಅಮಲೀಕರಿಸುವ ಪ್ರಯತ್ನವಾಗಿದೆ ಎಂದು ಅಶ್ರಫ್ ಟೀಕಾಪ್ರಹಾರ ನಡೆಸಿದ್ದಾರೆ.


ಬೀಫ್ ಸ್ಟಾಲ್ ನೆಪದಲ್ಲಿ ಪಾಲಿಕೆಯ ಮಾರ್ಕೆಟ್ ಗೆ ಭೂಮಿ ಪೂಜೆ ನಡೆಸುವುದಿಲ್ಲ ಎಂಬ ಶಾಸಕರು ಹೇಳಿದ್ದಾರೆ. ಅವರಿಗೆ ತಾಕತ್ತು ಇದ್ದರೆ ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಗುಜರಾತ್ ಮತ್ತು ಉತ್ತರ ಭಾರತದಲ್ಲಿ ಅಸ್ತಿತ್ವದಲ್ಲಿ ಇರುವ, ಜೈನ ಮತ್ತು ವೈದಿಕ ಒಡೆತನ ಮತ್ತು ಬಿಜೆಪಿ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಒಡೆತನದ ಬೀಫ್ ರಫ್ತು ಪ್ಲಾಂಟ್ ನಿಂದ ಹೊರಡುವ ಶೀತಲೀಕೃತ ರಫ್ತು ಹಡಗುಗಳನ್ನು ತಡೆಯುವ ಪ್ರಯತ್ನ ನಡೆಸಲಿದೆ ಎಂದು ಸವಾಲು ಹಾಕಿದ್ದಾರೆ.


ಇಂದು ಬೀಫ್ ಹೆಸರಿನಲ್ಲಿ ರಾಜಕೀಯ ಮಾಡುವ ಬಿ.ಜೆ.ಪಿ ಸರ್ಕಾರಕ್ಕೆ ತಾಕತ್ತು ಇದ್ದರೆ ಬೀಫ್ ರಫ್ತು ನಿಲ್ಲಿಸಲಿ. ಸೆಂಟ್ರಲ್ ಮಾರ್ಕೆಟ್ ನಲ್ಲಿ ಭವಿಷ್ಯದಲ್ಲಿ ಮಾರಾಟವಾಗುವ ಬೀಫ್ ಮುಸಲ್ಮಾನರು ಮಾರಾಟ ಮಾಡುವ ಬೀಫ್ ಆಗಿರುವುದಿಲ್ಲ, ಬದಲಾಗಿ ಅದಾನಿ, ಅಂಬಾನಿ, ರಾಜೀವ್ ಚಂದ್ರಶೇಖರ್ ಒಡೆತನದ ಪ್ಯಾಕೇಜ್ ಡ್ ಬಫೆಲ್ಲೋ ಮೀಟ್ ಎಂಬ ಸಂಸ್ಕರಿತ ಬೀಫ್ ಎಂಬುದು ಜನರು ಅರ್ಥ ಮಾಡಿ ಕೊಳ್ಳಲಿ. ಈ ದೇಶದ ಜನ ಜಾಗೃತರಾಗಿದ್ದಾರೆ, ಅವರಿಗೆ ಸಂಘ ಪರಿವಾರದ ಪ್ರಹಸನ ಅರ್ಥವಾಗುತ್ತಿದೆ ಎಂಬುದನ್ನು ವೇದವ್ಯಾಸ ಕಾಮತ್ ಅರಿಯಲಿ ಎಂದು ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.

Join Whatsapp
Exit mobile version