Home ಟಾಪ್ ಸುದ್ದಿಗಳು ಅಪ್ರಾಪ್ತ ಬಾಲಕಿ ಪ್ರೌಢಾವಸ್ಥೆ ತಲುಪಿದ ನಂತರ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು: ದೆಹಲಿ ಹೈಕೋರ್ಟ್

ಅಪ್ರಾಪ್ತ ಬಾಲಕಿ ಪ್ರೌಢಾವಸ್ಥೆ ತಲುಪಿದ ನಂತರ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು: ದೆಹಲಿ ಹೈಕೋರ್ಟ್

ನವದೆಹಲಿ: ಮುಸ್ಲಿಂ ಕಾನೂನಿನ ಪ್ರಕಾರ, ಪ್ರೌಢಾವಸ್ಥೆಗೆ ತಲುಪಿದ ಅಪ್ರಾಪ್ತ ವಯಸ್ಸಿನ ಹುಡುಗಿ ತನ್ನ ಹೆತ್ತವರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು ಮತ್ತು ಅವಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ ಸಹ ತನ್ನ ಗಂಡನೊಂದಿಗೆ ವಾಸಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ವರ್ಷದ ಮಾರ್ಚ್ ನಲ್ಲಿ ವಿವಾಹವಾದ ಮುಸ್ಲಿಂ ದಂಪತಿ ತಮ್ಮನ್ನು ಬೇರ್ಪಡಿಸದಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮುಸ್ಲಿಂ ವಿಧಿವಿಧಾನಗಳು ಮತ್ತು ಆಚರಣೆಗಳ ಪ್ರಕಾರ ರಕ್ಷಣೆ ನೀಡುವಾಗ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

15 ವರ್ಷದ ಅಪ್ರಾಪ್ತ ಯುವತಿಯ ಮದುವೆಯನ್ನು ಪೋಷಕರು ವಿರೋಧಿಸಿದ್ದು , ಆಕೆಯ ಪತಿಯ ವಿರುದ್ಧ ಐಪಿಸಿ ಸೆಕ್ಷನ್ 363 ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು. ತದನಂತರ ಸೆಕ್ಷನ್ 376 ಮತ್ತು ಸೆಕ್ಷನ್ 6 ಪೋಕ್ಸೊವನ್ನು ಸೇರಿಸಲಾಗಿತ್ತು.

ತನ್ನ ಹೆತ್ತವರು ನಿಯಮಿತವಾಗಿ ಥಳಿಸುತ್ತಿದ್ದುದರಿಂದ, ತಾನು ಸ್ವಂತ ಇಚ್ಛೆಯಿಂದ ಓಡಿಹೋಗಿ ಮದುವೆಯಾಗಿರುವುದಾಗಿ ಯುವತಿ ತಿಳಿಸಿದ್ದಾಳೆ.

ಅಲ್ಲದೆ ದಂಪತಿಯನ್ನು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ (ಡಿಡಿಯು) ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರು ಲೈಂಗಿಕ ಸಂಪರ್ಕ ಹೊಂದಿದ್ದು, ಮಗುವನ್ನು ನಿರೀಕ್ಷಿಸುತ್ತಿದ್ದರು ಎಂದು ಸ್ಟೇಟಸ್ ವರದಿಯು ಬಹಿರಂಗಪಡಿಸಿದೆ.

ಹಾಗಾಗಿ ದಂಪತಿ ಕಾನೂನುಬದ್ಧವಾಗಿ ಒಬ್ಬರಿಗೊಬ್ಬರು ಮದುವೆಯಾಗಿರುವುದರಿಂದ, ಮದುವೆಯ ಸಾರವಾದ ಪರಸ್ಪರರ ಸಹವಾಸವನ್ನು ನಿರಾಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಅರ್ಜಿದಾರರನ್ನು ಬೇರ್ಪಡಿಸಿದರೆ, ಅದು ದಂಪತಿಗೆ ಮತ್ತು ಆಕೆಗೆ ಹುಟ್ಟಲಿರುವ ಮಗುವಿಗೆ ಹೆಚ್ಚಿನ ಆಘಾತವನ್ನು ಉಂಟುಮಾಡುತ್ತದೆ. ಅರ್ಜಿದಾರರ ಅತ್ಯುತ್ತಮ ಹಿತಾಸಕ್ತಿಯನ್ನು ರಕ್ಷಿಸುವುದು ಇಲ್ಲಿನ ಗುರಿಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Join Whatsapp
Exit mobile version