Home ಟಾಪ್ ಸುದ್ದಿಗಳು ಮಂಗಳಮುಖಿಯರಿಗೆ ದೇಶದಲ್ಲೇ ಪ್ರಥಮ ಬಾರಿ ಪುನರ್ವಸತಿ ಕಲ್ಪಿಸುವ “ಮಂಗಳ ಗ್ರಾಮ”ಕ್ಕೆ ಸಚಿವ ವಿ. ಸೋಮಣ್ಣ ಚಾಲನೆ

ಮಂಗಳಮುಖಿಯರಿಗೆ ದೇಶದಲ್ಲೇ ಪ್ರಥಮ ಬಾರಿ ಪುನರ್ವಸತಿ ಕಲ್ಪಿಸುವ “ಮಂಗಳ ಗ್ರಾಮ”ಕ್ಕೆ ಸಚಿವ ವಿ. ಸೋಮಣ್ಣ ಚಾಲನೆ

ಬೆಂಗಳೂರು; ತೃತೀಯ ಲಿಂಗಿಗಳಿಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಂಗಳಮುಖಿಯರಿಗೆ ಪುನರ್ವಸತಿ ಎಂಬ ಆಶಯದೊಂದಿಗೆ “ಮಂಗಳ ಗ್ರಾಮ” ನಿರ್ಮಾಣಕ್ಕೆ ವಸತಿ ಸಚಿವ ವಿ. ಸೋಮಣ್ಣ ಇಂದು ಚಾಲನೆ ನೀಡಿದರು. ಕೆಂಗೇರಿ ಹೊಬಳಿಯ ದೊಡ್ಡ ಆಲದ ಮರ ಸಮೀಪದ ಮಾಳಿಗೊಂಡನಹಳ್ಳಿಬಯಲ್ಲಿ ಏಳು ಎಕರೆ ಭೂಮಿಯಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ಸೌಲಭ್ಯ ಕಲ್ಪಿಸುತ್ತಿದ್ದು, 700 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ವಿ. ಸೋಮಣ್ಣ ಭೂಮಿ ಪೂಜೆ ನೆರವೇರಿಸಿದರು. ಇಲ್ಲಿ ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಲಿಂಗತ್ಪ ಅಲ್ಪ ಸಂಖ್ಯಾತ ಸಮುದಾಯಕ್ಕೆ ಈ ಯೋಜನೆ ಆಶಾಕಿರಣವಾಗಿದೆ.


ಸಚಿವ ವಿ. ಸೋಮಣ್ಣ ಮಾತನಾಡಿ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತೃತೀಯ ಲಿಂಗಿಗಳಿಗಾಗಿಯೇ ಈ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆ ಒಂದೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿಲ್ಲಬಾರದು. ಫಲಾನುಭವಿ ತನ್ನ ಪಾಲಿನ ಹಣ ನೀಡಲಿ, ಬಿಡಲಿ ಕಾಮಗಾರಿ ನಿರಂತರವಾಗಿ ಮುಂದುವರೆಯಬೇಕು. ಇದೊಂದು ವಿನೂತನ ಯೋಜನೆಯಾಗಿದ್ದು, ಎಸ್.ಸಿ.ಪಿ – ಟಿ.ಎಸ್.ಪಿ ಮತ್ತಿತರ ಮೂಲಗಳಿಂದಲೂ ಸಹ ಹೆಚ್ಚಿನ ನೆರವು ಪಡೆದು “ಮಂಗಳ ಗ್ರಾಮ” ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.


ಇಲ್ಲಿ ನಿರ್ಮಿಸುವ ಮನೆಗಳಲ್ಲಿ ಮಂಗಳಮುಖಿ ಫಲಾನುಭವಿಗಳು ಬಂದು ವಾಸ ಮಾಡಬೇಕು. ಮುಂದಿನ ಕೆಲ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಒಂದಿಂಚು ಭೂಮಿ ಸಿಗುವುದಿಲ್ಲ. ಮಂಗಳ ಗ್ರಾಮ ಒಳಿತನ್ನು ಬಯಸುವ ಗ್ರಾಮವಾಗಿದೆ. ಕೀಳರಿಮೆ ಬಿಡಿ. ಸ್ವಾವಲಂಬಿಯಾಗಿ ಬದುಕುಕಟ್ಟಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಇದೇ 20 ರಂದು ಬೆಂಗಳೂರು ಹೊರ ವರ್ತುಲ ರೈಲು ಯೋಜನೆಗೆ ಚಾಲನೆ ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಯೂನಿವರ್ಸಿಟಿಯನ್ನು ಉದ್ಘಾಟಿಸುತ್ತಿದ್ದಾರೆ. ಅಂಬೇಡ್ಕರ್ ಕುರಿತಂತೆ ಚಾಮರಾಜನಗರದಲ್ಲಿಯೂ ಸಹ ಮತ್ತೊಂದು ವಿವಿ ಆರಂಭವಾಗುತ್ತಿದೆ. ಸಂವಿಧಾನ ಶಿಲ್ಪಿಯ ಹಲವಾರು ಆಶೋತ್ತರಗಳು ಸಾಕಾರಗೊಳ್ಳಬೇಕಾದ ಸನ್ನಿವೇಶ ಬಂದಿದ್ದು, ಎಲ್ಲರೂ ಸಮಾಜ ಮುಖಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಸಮತಾ ಸೈನಿಕ ದಳದ ಮುಖ್ಯಸ್ಥ ಎಂ. ವೆಂಕಟಸ್ವಾಮಿ ಮಾತನಾಡಿ, ಮಂಗಳ ಮುಖಿಯರಿಗಾಗಿಯೇ ಈ ವಿಶೇಷ ಯೋಜನೆಯನ್ನು ಸಚಿವ ಸೋಮಣ್ಣ ಅವರು ಮುತುವರ್ಜಿ ವಹಿಸಿ ಸಾಕಾರಗೊಳಿಸಿದ್ದಾರೆ. ಇದರಿಂದ ವಸತಿ ಯೋಜನೆಗೆ ಹೊಸ ಆಯಾಮ ದೊರೆತಿದೆ. ಕೊಳಚೆ ಪ್ರದೇಶದ ಜನರಿಗೆ ಸೂರು ಕಲ್ಪಿಸುವ ವಿಷಯದಲ್ಲಿ ದಲ್ಲಾಳಿ ಕೆಲಸ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

Join Whatsapp
Exit mobile version