Home ಟಾಪ್ ಸುದ್ದಿಗಳು ಸಚಿವ ಅಶ್ವತ್ಥ ನಾರಾಯಣ್ ಪ್ರಚೋದನಾಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಸಂಪುಟದಿಂದ ವಜಾಗೊಳಿಸಲು ಒತ್ತಡ

ಸಚಿವ ಅಶ್ವತ್ಥ ನಾರಾಯಣ್ ಪ್ರಚೋದನಾಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಸಂಪುಟದಿಂದ ವಜಾಗೊಳಿಸಲು ಒತ್ತಡ

ಬೆಂಗಳೂರು: ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕೆಂದು ಹೇಳಿರುವ ಸಚಿವ ಅಶ್ವತ್ಥ ನಾರಾಯಣ್ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಚಿವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಡ ಹೆಚ್ಚಾಗಿದೆ.


ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿ, ಕೊಡಗಿಗೆ ಹೋದಾಗ ಬಿಜೆಪಿಗರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಹೊಡೆಯುವ ಕೆಲಸ ಮಾಡಿದ್ದರು, ಈಗ ಅವರ ಹತ್ಯೆಗೆ ಪ್ರಚೋದಿಸುವ ಹೇಳಿಕೆಯನ್ನು ಸಚಿವರೇ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಗೃಹ ಇಲಾಖೆ ಏನಾದರೂ ಬದುಕಿದ್ದರೆ ಮೊದಲು ಬೇಜವಾಬ್ದಾರಿ ಸಚಿವ ಅಶ್ವತ್ಥ್ ನಾರಾಯಣ್ ಅವರ ಮೇಲೆ ಕ್ರಮ ಜರುಗಿಸಲಿ ಮತ್ತು ಈತನನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಥೋಡ್ ಟ್ವೀಟ್ ಮಾಡಿ, ಸಚಿವ ಅಶ್ವತ್ಥನಾರಾಯಣ ಅವರೇ ನಿಮ್ಮೊಳಗೂ ಕೊಲೆಗಡುಗ ಸಿದ್ಧಾಂತದ ಸನಾತನ DNA ಇದೆ ಎಂದು ಸಾಬೀತುಪಡಿಸಿದ್ದೀರಿ. ನಿಮ್ಮ ತೊಡೆಯಲ್ಲಿ ತಾಕತ್ತಿದ್ದರೆ ನೀವೇ ಆ ಕೆಲಸಕ್ಕೆ ಮುಂದಾಗಿ ನೋಡೋಣ. ಕಂಡವರ ಮಕ್ಕಳನ್ನು ಕೊಲೆಗೆ ಪ್ರಚೋದಿಸಿದ್ದೀರಿ. ನಿಮ್ಮ ಮಕ್ಕಳಿಗೇ ಈ ಕೊಲೆಗಡುಕ ಸಿದ್ಧಾಂತ ಹೇಳಿಕೊಟ್ಟು ಪ್ರಚೋದಿಸಬಹುದಲ್ಲವೇ ? ಎಂದು ತಿವಿದಿದ್ದಾರೆ.


ಕೊಲೆಗಡುಕ ಮನಸ್ಥಿತಿಯ ಅಶ್ವತ್ಥನಾರಾಯಣ, ಸಿದ್ದರಾಮಯ್ಯ ಅವರನ್ನು ಕೊಲ್ಲಲು ಕಂಡವರ ತಾಯಿಯ ಮಕ್ಕಳನ್ನು ಪ್ರಚೋದಿಸಿದ್ದೀರಿ. ನಿಮಗೇನು ನರರೋಗ ಬಂದಿದೆಯಾ? ನಿಮ್ಮ ಸರ್ಕಾರಕ್ಕೆ ಬಂದಿರುವ ನರರೋಗ ನಿಮಗೆ, ನಿಮ್ಮ ಮಕ್ಕಳಿಗೂ ಬಂದಿದೆಯಾ? ನಿಮ್ಮ ಮೆದುಳು-ಹೃದಯ ಸತ್ತೋಗಿ ನಾಲಗೆ ಮಾತ್ರ ಜೀವಂತ ಇದೆಯಾ? ಆರಗ ಜ್ಞಾನೇಂದ್ರ ಬದುಕಿದ್ದೀರಾ? ಎಂದು ಕಿಡಿಕಾರಿದ್ದಾರೆ.
ಸನಾತನ ಕೊಲೆಗಡುಕರ ಗುಲಾಮರಾಗಿರುವ ಅಶ್ವತ್ಥನಾರಾಯಣ ನಿಮ್ಮ ನಾಲಗೆ ಬೊಗಳಿದ್ದನ್ನು ನೀವೇ ಮಾಡಲು ಮುಂದಾಗಿ ನೋಡಿ. ನಾಡಿನ ಜನತೆ ನಿಮ್ಮ ನಾಲಗೆ ಸೀಳಿ ನಾಯಿಗಳಿಗೆ ಹಾಕದಿದ್ದರೆ ಕೇಳಿ. ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ-ನಿಮ್ಮನ್ನು ಸಾಕಿಕೊಂಡಿರುವ ಸನಾತನಿ ಭಯೋತ್ಪಾದಕ ಸಂಘಿ ಪರಿವಾರಕ್ಕೆ. ಗೋಡ್ಸೆ ಸಂತತಿಯ ಸಾಂಕ್ರಾಮಿಕಕ್ಕೆ ತುತ್ತಾಗಿದ್ದೀರಿ ಎಂದು ಪ್ರಕಾಶ್ ಹರಿಹಾಯ್ದಿದ್ದಾರೆ.
ಸ್ಯಾಂಟ್ರೋ ರವಿ ಸರಬರಾಜು ಮಾಡಿದ ಸವಲತ್ತುಗಳನ್ನು ಸವಿದು ಸರ್ಕಾರ ಸುಖಾಸನದಲ್ಲಿ ಮೈ ಚಾಚಿ ಮಲಗಿಬಿಟ್ಟಿದೆಯಾ ಆರಗ ಜ್ಞಾನೇಂದ್ರ ಅವರೇ? ಬಹಿರಂಗವಾಗಿ ಕೊಲೆಗೆ ಕರೆ ಕೊಟ್ಟಿರುವ ಸಚಿವ ಅಶ್ವಥ್ ನಾರಾಯಣ್ ಅವರ ಮೇಲೆ ಇದುವರೆಗೂ ಕ್ರಿಮಿನಲ್ ಪ್ರಕರಣ ಏಕೆ ದಾಖಲಿಸಿಲ್ಲ? ನಿಮ್ಮ ಹೈಕಮಾಂಡ್ ಕೂಡ ಈ ಕೊಲೆ ಸಂಚಿನಲ್ಲಿ ಭಾಗಿ ಆಗಲು ಸೂಚಿಸಿದೆಯಾ ನಿಮಗೆ? ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದಾರೆ.

ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಅಶ್ವತ್ಥ ನಾರಾಯಣ್, ಇದು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
“ಮಂಡ್ಯದಲ್ಲಿ ಟಿಪ್ಪು -ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ. ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗ. ನಾನು ಆಡಿರುವ ಮಾತುಗಳನ್ನು ಆ ಚೌಕಟ್ಟಿನಲ್ಲೇ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯ” ಎಂದು ಗುರುವಾರ ಟ್ವೀಟ್ ಮಾಡಿದ್ದಾರೆ.
“ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ” ಎಂದು ಹೇಳಿದ್ದಾರೆ.

Join Whatsapp
Exit mobile version