Home Uncategorized ಬೈಕ್ ಮೇಲೆ ಬಿದ್ದ ಮೆಟ್ರೋ ಪಿಲ್ಲರ್: ತಾಯಿ, ಮಗು ಮೃತ್ಯು

ಬೈಕ್ ಮೇಲೆ ಬಿದ್ದ ಮೆಟ್ರೋ ಪಿಲ್ಲರ್: ತಾಯಿ, ಮಗು ಮೃತ್ಯು

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಮೆಟ್ರೋ ಕಾಮಗಾರಿಯ ವೇಳೆ ದುರಂತ ಸಂಭವಿಸಿ ಸಾಫ್ಟ್‌’ವೇರ್ ಇಂಜಿನಿಯರ್ ತಾಯಿ-ಮಗು ದಾರುಣ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ನಾಗವಾರದ ವರ್ತುಲ ರಸ್ತೆಯ ಕಲ್ಯಾಣ್ ನಗರದಿಂದ ಎಚ್‌’ಆರ್‌’ಬಿಆರ್ ಲೇಔಟ್‌’ಗೆ ಹೋಗುವ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌’ನ ರಾಡ್’ಗಳು ದಿಢೀರ್‌ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.

ಮಾನ್ಯತಾ ಟೆಕ್ ಪಾರ್ಕ್ ನ ಸಾಫ್ಟ್‌’ವೇರ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಮೃತಪಟ್ಟವರು.

ತೇಜಸ್ವಿನಿ ತನ್ನ ಇಬ್ಬರು ಮಕ್ಕಳು ಹಾಗೂ ಪತಿ ಜೊತೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ.

ತೇಜಸ್ವಿನಿ ಅವರ ಪತಿ ಧಾರವಾಡ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್ ಹಾಗೂ ಮತ್ತೊಬ್ಬ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗದಗ ಮೂಲದ ತೇಜಸ್ವಿನಿ ದಂಪತಿ, ಹೆಣ್ಣೂರಿನ ನಾಗವಾರದ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್’ನಲ್ಲಿ ವಾಸಿಸುತ್ತಿದ್ದು ಲೋಹಿತ್ ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮಾನ್ಯತಾ ಟೆಕ್ ಪಾರ್ಕ್’ನ ಮೋಟೋರೋಲಾ ಕಂಪನಿಯಲ್ಲಿ ಸಾಫ್ಟ್‌’ವೇರ್ ಇಂಜಿನಿಯರ್ ಆಗಿ ತೇಜಸ್ವಿನಿ ಕೆಲಸ ಮಾಡುತ್ತಿದ್ದರು.

ದಂಪತಿಗೆ ಅವಳಿ- ಜವಳಿ ಮಕ್ಕಳಿದ್ದು ಇವರಿಬ್ಬಗೂ 2 ವರ್ಷ 6 ತಿಂಗಳಾಗಿತ್ತು. ಬೆಳಿಗ್ಗೆ 10.30ರ ವೇಳೆ ‌ತೇಜಸ್ವಿನಿಯನ್ನು ಕೆಲಸಕ್ಕೆ ಮಾನ್ಯತಾ ಟೆಕ್ ಪಾರ್ಕ್ ಗೆ ಬಿಟ್ಟು ಬರಲು ಲೋಹಿತ್ ಅವರು ಬೈಕ್’ನಲ್ಲಿ ಹೊರಟಿದ್ದು, ಮಗಳನ್ನು ಹಿಂದೆ ಅದರ ಹಿಂದೆ ವಿಹಾನ್ ಕೊನೆಯಲ್ಲಿ ತೇಜಸ್ವಿನಿಯನ್ನು ಕೂರಿಸಿಕೊಂಡು ಅಪಾರ್ಟ್‌ಮೆಂಟ್‌ನಿಂದ ಹೊರಟಿದ್ದಾರೆ.

ಮಾರ್ಗ ಮಧ್ಯದಲ್ಲಿ ನಾಗವಾರ ವರ್ತುಲ ರಸ್ತೆಯ ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಪಿಲ್ಲರ್‌’ಗೆ ನಿಲ್ಲಿಸಿದಂತಹ ರಾಡ್‌’ಗಳು ಏಕಾಏಕಿ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಪರಿಣಾಮ ತೇಜಸ್ವಿನಿ ಹಾಗೂ ಮಗು ವಿಹಾನ್‌  ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣವೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ತಾಯಿ, ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಲೋಹಿತ್ ಸಹೋದರ, ಅಣ್ಣ-ಅತ್ತಿಗೆ ಮತ್ತು ಅವರ ಇಬ್ಬರು ಮಕ್ಕಳು ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಪಿಲ್ಲರ್ ಬಿದ್ದಿದೆ. ಅತ್ತಿಗೆ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಅಣ್ಣ ಮತ್ತು ಒಂದು ಮಗು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದರು.

  ತೆಲಂಗಾಣದ ಹೈದ್ರಾಬಾದ್ ಮೂಲದ ಎನ್’ಸಿಸಿ ಕಂಪನಿಯು ಈ ಕಾಮಗಾರಿಯನ್ನು ನಡೆಸುತ್ತಿದೆ. ಸದ್ಯ ಕುಸಿದು ಬಿದ್ದ ನಿರ್ಮಾಣ ಹಂತದ ಪಿಲ್ಲರ್ ರಾಡ್​’ಗಳನ್ನು ತೆರವು ಮಾಡುವ ಕಾರ್ಯ ಆರಂಭವಾಗಿದೆ.

ಗ್ಯಾಸ್ ಕಟರ್ ಮೂಲಕ ರಾಡ್​’ಗಳನ್ನು ಮೆಟ್ರೋ ಪಿಲ್ಲರ್ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕಟ್ ಮಾಡಿ ತೆಗೆಯುತ್ತಿದ್ದಾರೆ. 2 ರಿಂದ 3 ಗ್ಯಾಸ್ ಕಟರ್ ಬಳಸಿ ಬೃಹತ್​ ಪಿಲ್ಲರ್​ ತೆರವು ಮಾಡಲಾಗುತ್ತಿದ್ದು, ನಂತರ ಕ್ರೈನ್ ಸಹಾಯದ ಮೂಲಕ ಪಿಲ್ಲರ್​ ತೆರವು ಮಾಡಲಾಗುತ್ತದೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್, ಎಸಿಪಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೋವಿಂದಪುರ ಪೊಲೀಸರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version