ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿತ ಪ್ರಸ್ತಾವಿತ ಮೇಕೆದಾಟು ಯೋಜನೆ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿರುಗೇಟು ನೀಡಿದ್ದಾರೆ. ಇಂದು ಈ ಕುರಿತು ಕನ್ನಡದಲ್ಲಿಯೇ X ಮಾಡಿದ್ದಾರೆ.
‘ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರೇ, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ’ ಎಂದು ಸಚಿವರು ಹೇಳಿದ್ದಾರೆ.
ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ದ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ CWMAಯ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ ಎಂದು ಸಚಿವರು ತಮ್ಮ ಸರಕಾರವನ್ನು ಬಚಾವ್ ಮಾಡಲು ನೋಡಿದ್ದಾರೆ.
ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದ್ದಾರೆ.