Home ಕರಾವಳಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (MEIF) ಮಹಾಸಭೆ : ನೂತನ ಅಧ್ಯಕ್ಷರಾಗಿ ಮೂಸಬ್ಬ ಪಿ ಬ್ಯಾರಿ...

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (MEIF) ಮಹಾಸಭೆ : ನೂತನ ಅಧ್ಯಕ್ಷರಾಗಿ ಮೂಸಬ್ಬ ಪಿ ಬ್ಯಾರಿ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮಹಾಸಭೆಯು ಫೆಬ್ರವರಿ 22 ರಂದು ಕಂಕನಾಡಿ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರಗಿತು. ಸಂಸ್ಥೆಯ ಗೌರವಾಧ್ಯಕ್ಷ ಟಿ.ಕೆ.ಉಮರ್ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜನಾಬ್ ಬಿ.ಯಂ.ಮುಮ್ತಾಝ್ ಅಲೀ ಸ್ವಾಗತಿಸಿದರು. ಸಭೆಯಲ್ಲಿ ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಮೊಹಮ್ಮದ್ ಬ್ಯಾರಿಯವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಕೊನೆಯಲ್ಲಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಮೂಸಬ್ಬ ಪಿ ಬ್ಯಾರಿಯವರನ್ನು ಮುಂದಿನ ಅವಧಿಯ ನೂತನ ಅಧ್ಯಕ್ಷರಾಗಿ ಆರಿಸಲಾಗಿದೆ.


ಮುಸ್ತಫಾ ಸಅದಿ ಮೂಳೂರ್ ನಡೆಸಿದ ಪ್ರಾರ್ಥನೆಯಲ್ಲಿ ಇತ್ತೀಚೆಗೆ ನಿಧನರಾದ ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಬ್ಯಾರಿಯವರನ್ನು ಸ್ಮರಿಸಿ ಅಗಲಿದ ದಿವ್ಯಾತ್ಮಕ್ಕೆ ಶಾಂತಿ ಕೋರಿದರು. ಪ್ರಭಾರ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿಯವರು ಪ್ರಸ್ತಾವನೆಗ್ಯೆದರು. ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್ ಹಾಗೂ ಜೊತೆ ಕಾರ್ಯದರ್ಶಿ ಬಿ.ಮಯ್ಯದ್ದಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿದರು.

ವಿಶೇಷ ಆಹ್ವಾನಿತರಾಗಿ ಸಭೆಗೆ ಆಗಮಿಸಿದ್ದ ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ ಹಾಗೂ ದ.ಕ.ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಾದ ಶ್ರೀ ಭರತ್ ಕುಮಾರ್ ರವರು ಸಭೆಯಲ್ಲಿ ನಡೆಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಕ್ತ ವರ್ಷ ಸರಕಾರದಿಂದ ಬಂದಿರುವ ಆದೇಶಗಳಲ್ಲಿ ಮುಖ್ಯವಾಗಿ ಶಾಲಾ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳ ಬಗ್ಗೆ ಸವಿವರವಾಗಿ ಸಭೆಗೆ ತಿಳಿಯಪಡಿಸಿದರು. ವಿದ್ಯಾಂಗ ಉಪನಿರ್ದೇಶಕರಿಗೆ ಒಕ್ಕೂಟ ಶಾಲೆಗಳ ಬವಣೆಗಳ ಬಗ್ಗೆ ಮನವಿ ಪತ್ರವನ್ನೂ ಸಲ್ಲಿಸಲಾಯ್ತು.

ಮುಂದಿನ ಅವಧಿಗೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಈ ಕೆಳಗಿನಂತೆ ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಟಿ.ಕೆ.ಉಮರ್, ಗೌರವ ಸಲಹೆಗಾರರಾಗಿ ಸಯ್ಯದ್ ಬ್ಯಾರಿ, ನೂತನ ಅಧ್ಯಕ್ಷರಾಗಿ ಮೂಸಬ್ಬ ಪಿ.ಬ್ಯಾರಿ , ಉಪಾಧ್ಯಕ್ಷರಾಗಿ ಬಿ.ಯಂ.ಮುಮ್ತಾಝ್ ಅಲೀ (ಕೇಂದ್ರ ವಲಯ), ಅಬ್ದುಲ್ ರಹಿಮಾನ್ ಮಣಿಪಾಲ (ಉತ್ತರ ವಲಯ) ಕೆ.ಎಂ.ಮುಸ್ತಫಾ ಸುಳ್ಯ (ಪೂರ್ವ ವಲಯ) ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ.ನಝೀರ್, ಜೊತೆ ಕಾರ್ಯದರ್ಶಿಗಳಾಗಿ ಬಿ.ಮಯ್ಯದ್ದಿ, NMPT (ಆಡಳಿತ), ಮುಹಮ್ಮದ್ ರಿಯಾಝ್, ಕಣ್ಣೂರ್ (ಕಾರ್ಯಕ್ರಮ), ಪಿ.ಎ.ಇಲ್ಯಾಸ್, ಕಾಟಿಪಳ್ಳ (ಮಾಧ್ಯಮ), ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ತೊಕ್ಕೊಟ್ಟು ಇವರನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಮೀನ್ ಅಹ್ಸನ್ ಬಂಟ್ವಾಳ, ಶಾಬಿಹ್ ಅಹ್ಮದ್ ಕಾಝಿ ಉಡುಪಿ , ಬಿ.ಎ.ಇಕ್ಬಾಲ್ ಕೃಷ್ಣಾಪುರ, ನಿಸಾರ್ ಫಕೀರ್ ಮುಹಮ್ಮದ್ ಮಂಗಳೂರು , ಸಿರಾಜ್ ಮನೆಗಾರ ಜೋಕಟ್ಟೆ, ಯು.ಕೆ.ಇಬ್ರಾಹೀಂ ಉಳ್ಳಾಲರನ್ನು ಆಯ್ಕೆ ಮಾಡಲಾಯಿತು.
ಸಭಾಧ್ಯಕ್ಷ ಪೀಠದಿಂದ ಮಾತನಾಡಿದ ಗೌರವಾಧ್ಯಕ್ಷರಾದ ಟಿ.ಕೆ.ಉಮರ್ ರವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಂದ ನಡೆಸಲ್ಪಡುವ ಶಾಲೆಗಳಲ್ಲಿ ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನೂ ದಾಖಲಿಸಿ ರಾಷ್ಟ್ರೀಯ ಭಾವ್ಯೆಕ್ಯಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ಹಾಗೂ ಕಲಿಕೆಯಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಬಾಲಕರನ್ನು ಮುಂದಕ್ಕೆ ತರುವ ತಂತ್ರಗಾರಿಕೆಯನ್ನು ಹಮ್ಮಿಕೊಳ್ಳಲು ಕರೆ ನೀಡಿದರು.

ನೂತನ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿಯವರು ಮಾತನಾಡಿ ಮೀಫ್ ಒಕ್ಕೂಟದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೂ ಶಿಕ್ಷಕ ವೃಂದ ಹಾಗೂ ಆಫೀಸ್ ಸಿಬ್ಬಂದಿಗಳಿಗೂ ಪ್ರತ್ಯೇಕ ತರಬೇತಿ ಶಿಬಿರಗಳನ್ನು ನಡೆಸಿ ಒಟ್ಟಾರೆ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡಲು ಯೋಜನೆಗಳನ್ನು ರೂಪು ಗೊಳಿಸಲು ಶ್ರಮಿಸುವುದಾಗಿ ತಿಳಿಸಿ ಕೊನೆಯಲ್ಲಿ ವಂದಿಸಿದರು.

Join Whatsapp
Exit mobile version