Home Uncategorized ಡೊಮಿನಿಕಾ ಹೈಕೋರ್ಟ್‌ ನಿಂದ ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಣೆ

ಡೊಮಿನಿಕಾ ಹೈಕೋರ್ಟ್‌ ನಿಂದ ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಣೆ

ನವದೆಹಲಿ : ಪಿಎನ್‌ ಬಿ ಹಗರಣದಲ್ಲಿ ಬಹುಕೋಟಿ ವಂಚನೆ ಎಸಗಿ ಪರಾರಿಯಾಗಿ, ಡೊಮಿನಿಕಾದಲ್ಲಿ ಬಂಧಿಯಾಗಿರುವ ಉದ್ಯಮಿ ಮೆಹುಲ್‌ ಚೋಕ್ಸಿಗೆ ಜಾಮೀನು ನೀಡಲು ಅಲ್ಲಿನ ನ್ಯಾಯಾಲಯ ನಿರಾಕರಿಸಿದೆ. ಮತ್ತೆ ಪರಾರಿಯಾಗುವ ಸಾಧ್ಯತೆಯಿರುವುದರಿಂದ ಚೋಕ್ಸಿಗೆ ಜಾಮೀನು ನೀಡದಿರಲು ಡೊಮಿನಿಕಾ ಹೈಕೋರ್ಟ್‌ ನಿರ್ಧರಿಸಿದೆ.

ಚೋಕ್ಸಿಗೆ ಆರೋಗ್ಯ ಸಮಸ್ಯೆಯಿದ್ದು, ಆತ ದೇಶಬಿಟ್ಟು ಹೋಗುವ ಯಾವುದೇ ಅವಕಾಶವಿಲ್ಲ. ಅದಲ್ಲದೆ ಆತ ಕೆರಿಬಿಯನ್‌ ನಾಡಿನ ನಾಗರಿಕನಾದ ಕಾರಣ ಆತನಿಗೆ ಜಾಮೀನು ನೀಡಬೇಕು ಎಂದು ಚೋಕ್ಸಿ ಪರ ವಕೀಲರು ಮನವಿ ಮಾಡಿದರು.

ಆದರೆ, ಅನಾರೋಗ್ಯ ಸಂಬಂಧ ಚೋಕ್ಸಿಗೆ ಚಿಕಿತ್ಸೆ ನೀಡಲಾಗಿದೆ. ಚೋಕ್ಸಿ ವಿರುದ್ಧ ಇಂಟರ್‌ ಪೋಲ್‌ ನೋಟಿಸ್‌ ಇದೆ. ಆತ ಮತ್ತೆ ಪರಾರಿಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ದ್ವೀಪ ರಾಷ್ಟ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪ ಚೋಕ್ಸಿ ಮೇಲಿದೆ. ಈ ಹಿಂದೆಯೂ ಚೋಕ್ಸಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಹೀಗಾಗಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲದೆ, ಡೊಮಿನಿಕಾ ಸರಕಾರ ಚೋಕ್ಸಿಯನ್ನು ನಿಷೇಧಿತ ವಲಸಿಗ ಎಂದು ಘೋಷಿಸಿದೆ. ಇದು ಚೋಕ್ಸಿಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ.

Join Whatsapp
Exit mobile version