ಮಂಗಳೂರು: ಕಾನೂನುಬಾಹಿರವಾಗಿ ಜಾನುವಾರು ಮಾಂಸ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧಿತರಾಗಿರುವ ಅರ್ಕುಳ ಗ್ರಾಮದ ಕೋಟೆ ನಿವಾಸಿ ಬಾತಿಶ್ ಅವರಿಗೆ ಸೇರಿದ ಶೆಡ್ ಮತ್ತು ಸಲಕರಣೆಗಳನ್ನು ಯಾಕೆ ಮುಟ್ಟುಗೋಲು ಹಾಕಬಾರದು ಎಂದು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ನೋಟಿಸ್ ಜಾರಿ ಮಾಡಿದ್ದಾರೆ.
ಪರವಾನಿಗೆ ಇಲ್ಲದೆ ಜಾನುವಾರು ಮಾಂಸ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಜು.12ರಂದು ಅಪರಾಹ್ನ 3ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಹಾಯಕ ಆಯುಕ್ತರು ಆರೋಪಿ ಬಾತಿಶ್ ಅವರಿಗೆ ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಎ.ಕೆ. ಖಾಲಿದ್ ಎಂಬವರಿಗೆ ಸೇರಿದ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸರು ಜು.3ರಂದು ದಾಳಿ ನಡೆಸಿದ್ದರು. ಅಲ್ಲದೆ 95 ಕೆ.ಜಿ. ಜಾನುವಾರುಗಳ ಮಾಂಸ, ಸ್ಥಳಗಳಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಯು ಕೃತ್ಯಕ್ಕೆ ಬಳಸಿದ್ದ ಶೆಡ್ ಮತ್ತು ಈ ಎಲ್ಲಾ ಸಲಕರಣೆಗಳ ಮುಟ್ಟುಗೋಲು ಹಾಕಿಕೊಳ್ಳಲು ಮಂಗಳೂರು ಗ್ರಾಮಾಂತರ ಠಾಣೆಯ ಎಸ್ ಐ ಅವರು ಮಂಗಳೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಮಂಗಳೂರು ಸಹಾಯಕ ಆಯುಕ್ತರು ಮತ್ತು ಉಪವಿಭಾಗ ದಂಡಾಧಿಕಾರಿಯು ಕೃತ್ಯಕ್ಕೆ ಬಳಸಿದ ಶೆಡ್ ಮತ್ತು ಸಲಕರಣೆಗಳನ್ನು ಯಾಕೆ ಮುಟ್ಟುಗೋಲು ಹಾಕಬಾರದು ಎಂಬ ಬಗ್ಗೆ ವಿಚಾರಣೆ ನಡೆಸಲು ಜೂ.12ರಂದು ಹಾಜರಾಗಲು ನೋಟಿಸ್ ಜಾರಿಗೊಳಿಸಿದ್ದಾರೆ. ಜೂ.12ರಂದು ಸ್ವತಃ ಆರೋಪಿ ಅಥವಾ ಅಧಿಕೃತ ಪ್ರತಿನಿಧಿ ಅಥವಾ ವಕೀಲರ ಮೂಲಕ ವಾದ, ಆಕ್ಷೇಪಣೆಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ನಿಯಾಮಾನುಸಾರ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಆಯುಕ್ತರು ತಿಳಿಸಿದ್ದಾರೆ.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರಡಿಯಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.