Home ಮಾಹಿತಿ ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದ ಮಾರುತಿ ಸುಜುಕಿ ಆದಾಯ

ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದ ಮಾರುತಿ ಸುಜುಕಿ ಆದಾಯ

►ಮಳಿಗೆಗಳಿಗೆ ಉಳಿದ ಹಳೆಯ ಕಾರುಗಳು

ಮುಂಬೈ: ಭಾರತದ ಅಗ್ರ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ತ್ರೈಮಾಸಿಕ ಆದಾಯವು ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದಿದ್ದು, ಷೇರು ಮಾರುಕಟ್ಟೆಯಲ್ಲೂ ಶೇ 6ರಷ್ಟು ಕುಸಿತ ದಾಖಲಿಸಿದೆ.


ಸಣ್ಣ ಕಾರುಗಳಿಗೆ ತಗ್ಗಿದ ಬೇಡಿಕೆ ಹಾಗೂ ಅಧಿಕ ರಿಯಾಯಿತಿ ದರದ ಮಾರಾಟದಿಂದಾಗಿ ಕಂಪನಿಯ ಆದಾಯ ಕುಸಿದಿದೆ. ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಶೇ 1.4ರ ವೃದ್ಧಿದರದಲ್ಲಿ ₹375 ಶತಕೋಟಿ ವಹಿವಾಟನ್ನು ಕಂಪನಿ ನಿರೀಕ್ಷಿಸಿತ್ತು. ಆದರೆ ಶೇ 0.4ರಷ್ಟು (₹372 ಶತಕೋಟಿ) ವಹಿವಾಟು ದಾಖಲಿಸಿದೆ ಎಂದು ಎಲ್ ಎಸ್ ಇಜಿ ದಾಖಲೆ ತಿಳಿಸಿದೆ. ಇದು ಕಳೆದ 11 ತ್ರೈಮಾಸಿಕದಲ್ಲೇ ಕನಿಷ್ಠ ಮಟ್ಟ ಎಂದೆನ್ನಲಾಗಿದೆ.


11 ತ್ರೈಮಾಸಿಕದ ದಾಖಲೆಗಳಿಗೆ ಹೋಲಿಸಿದಲ್ಲಿ ಒಟ್ಟು ಶೇ 17ರಷ್ಟು ಕಂಪನಿಯ ಆದಾಯ ಕುಸಿದಿದೆ. ಹೂಡಿಕೆಗಳ ಮೇಲಿನ ದೀರ್ಘಾವಧಿ ಪ್ರಯೋಜನವನ್ನು ಸರ್ಕಾರವು 2023ರ ಏಪ್ರಿಲ್ನಲ್ಲಿ ತೆಗೆದುಹಾಕಿತ್ತು. ಇದರ ಪರಿಣಾಮವಾಗಿ ಕಂಪನಿಯು ₹8 ಕೋಟಿಯಷ್ಟು ತೆರಿಗೆ ನಷ್ಟ ಅನುಭವಿಸಿತು. ಆದಾಗ್ಯೂ ವರ್ಷದಿಂದ ವರ್ಷಕ್ಕೆ ಕಂಪನಿಯ ಆದಾಯ ಶೇ 6.3ರ ದರದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


ಮಾರುತಿ ಸುಜುಕಿ ಕಂಪನಿಯ ಸಣ್ಣ ಕಾರುಗಳಿಗೆ ಬೇಡಿಕೆ ಕುಸಿದ ಪರಿಣಾಮ ಶೋರೂಂಗಳಲ್ಲಿ ಕಾರುಗಳು ಹಾಗೇ ನಿಂತಿವೆ. ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಿದ್ದರೂ, ಮಾರಾಟವಾಗದ ಹಳೆಯ ಕಾರುಗಳಿಗೆ ಭಾರೀ ರಿಯಾಯಿತಿ ನೀಡಿ ಮಾರಾಟ ಮಾಡಬೇಕಾದ ಸ್ಥಿತಿ ಇದೆ. ಕಳೆದ ಎರಡು ವರ್ಷಗಳಿಂದ ಮಾರಾಟ ಮಳಿಗೆಗಳು ಈ ಸ್ಥಿತಿ ಅನುಭವಿಸಿವೆ ಎಂದು ವರದಿಯಾಗಿದೆ.

Join Whatsapp
Exit mobile version