ಮಡಿಕೇರಿ: ಇದೇ ಜನವರಿ 30 ರಂದು ಹುತಾತ್ಮರ ದಿನಾಚರಣೆ ಹಿನ್ನೆಲೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಜಿಲ್ಲಾ ಖಜಾನೆಯಿಂದ ಮೆರವಣಿಗೆ ಮೂಲಕ ಗಾಂಧಿ ಮೈದಾನಕ್ಕೆ ತೆಗೆದುಕೊಂಡು ಹೋಗುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನ ಪ್ರಯುಕ್ತ ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಜನವರಿ, 30ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆ ಕಚೇರಿಯಿಂದ ಮೆರವಣಿಗೆಯಲ್ಲಿ ಪೊಲೀಸ್ ಗೌರವ ರಕ್ಷೆಯೊಂದಿಗೆ ತೆಗೆದುಕೊಂಡು ಹೋಗಿ ಗಾಂಧಿ ಮಂಟಪದಲ್ಲಿರಿಸಿ ಬೆಳಗ್ಗೆ 10.30ಗಂಟೆಗೆ ಸರ್ವಧರ್ಮ ಪ್ರಾರ್ಥನೆ, ನಂತರ 11 ಗಂಟೆಗೆ ಸರಿಯಾಗಿ 2 ನಿಮಿಷ ಮೌನ ಆಚರಣೆ ನಡೆಯಲಿದೆ ಎಂದು ತಿಳಿಸಿದರು.
ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿ ಸ್ಮಾರಕ ನಿರ್ಮಾಣ ಸಂಬಂಧ 50 ಲಕ್ಷ ರೂ. ಬಿಡುಗಡೆಗೆ ಸರ್ಕಾರ ಆದೇಶ ಹೊರಡಿಸಿದೆ. ಆ ನಿಟ್ಟಿನಲ್ಲಿ 35 ಸೆಂಟ್ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಿ, ಗಾಂಧೀಜಿ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಬೇಕಿದೆ ಎಂದು ಟಿ.ಪಿ.ರಮೇಶ್ ಅವರು ಕೋರಿದರು.
1934ರಲ್ಲಿ ಮಹಾತ್ಮ ಗಾಂಧೀಜಿ ಅವರು ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ನಗರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆ ಹಿನ್ನೆಲೆ ಗಾಂಧಿ ಮೈದಾನ ಎಂದು ಹೆಸರು ಬಂದಿದೆ. ಮಹಾತ್ಮ ಗಾಂಧೀಜಿಯವರು ಭಾಷಣ ಮಾಡಿದ ಸ್ಥಳದಲ್ಲಿ ಗಾಂಧಿ ಮಂಟಪ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.
ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಕೊಡಗು ಜಿಲ್ಲೆಯ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರು ತಂದು ಜಿಲ್ಲಾ ಖಜಾನೆಯಲ್ಲಿ ಇರಿಸಿದ್ದಾರೆ ಎಂದು ಟಿ.ಪಿ.ರಮೆಶ್ ಅವರು ಮಾಹಿತಿ ನೀಡಿದರು.