ಚೆನ್ನೈ: ವೈವಾಹಿಕ ಬಂಧಕ್ಕೆ ಒಳಗಾಗುವ ದಂಪತಿಯು ವಿವಾಹ ಎಂಬುದು ಕೇವಲ ದೈಹಿಕ ಸುಖಕ್ಕಾಗಿ ಇಲ್ಲ. ಬದಲಿಗೆ ಅದರ ಮುಖ್ಯ ಉದ್ದೇಶ ಸಂತಾನವೃದ್ಧಿಯಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ಮಕ್ಕಳನ್ನು ತಮ್ಮ ವಶಕ್ಕೆ ಪಡೆಯಲು ಬೇರ್ಪಟ್ಟಿರುವ ತಂದೆತಾಯಿಗಳು ನಡೆಸುವ ವ್ಯಾಜ್ಯಗಳು ತಮ್ಮ ಸುಖಕ್ಕಾಗಿ ಇಬ್ಬರು ವ್ಯಕ್ತಿಗಳು ತಮ್ಮ ಕೃತ್ಯದ ಮೂಲಕ ಈ ಕೆಟ್ಟ ಜಗತ್ತಿಗೆ ತಂದ ಮಕ್ಕಳನ್ನು ದುಃಖದಲ್ಲಿಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನ್ಯಾ. ಕೃಷ್ಣನ್ ರಾಮಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಹೇಳಿತು.
“ವಿವಾಹದ ಪರಿಕಲ್ಪನೆ ಕೇವಲ ವಿಷಯಲೋಲುಪತೆಯ ಸುಖಕ್ಕಾಗಿ ಇಲ್ಲ ಬದಲಿಗೆ ಅದು ಕೌಟುಂಬಿಕ ಸರಪಳಿಯನ್ನು ವಿಸ್ತರಣೆಗೆ ಕಾರಣವಾಗುವ ಸಂತಾನವೃದ್ಧಿಯ ಉದ್ದೇಶಕ್ಕಾಗಿ ಇದೆ ಎಂದು ವೈವಾಹಿಕ ಬಂಧಕ್ಕೆ ಒಳಗಾಗಿರುವ ವ್ಯಕ್ತಿಗಳಿಗೆ ತಿಳಿಸಲು ಈ ನ್ಯಾಯಾಲಯ ಬಯಸುತ್ತದೆ. ಇಬ್ಬರೂ ಪರಸ್ಪರ ಪವಿತ್ರ ಪ್ರಮಾಣ ಸ್ವೀಕರಿಸಿ ಮಾಡಿಕೊಂಡ ವಿವಾಹದಿಂದ ಜನಿಸಿದ ಮಗುವು ಆ ಇಬ್ಬರು ವ್ಯಕ್ತಿಗಳ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಕಾನೂನಿನ ಪರುಷಮಣಿಯ ಕಣ್ಣಿನಲ್ಲಿ ಇಂತಹ ಪ್ರಮಾಣಕ್ಕೆ ವಿರುದ್ಧವಾಗಿ ನಡೆದ ಯಾವುದೇ ಕ್ರಿಯೆ ಆ ಬಂಧಕ್ಕೆ ಒಳಗಾದವರ ಕೈಗಳ್ಳನ್ನು ಕಡಿದು ಹಾಕುತ್ತದೆಯೇ ವಿನಾ ಬೇರೇನೂ ಅಲ್ಲ” ಎಂದು ಪೀಠ ವಿವರಿಸಿತು.
ಹೀಗಾಗಿ ಒಂಬತ್ತು ಮತ್ತು ಆರು ವರ್ಷದ ತನ್ನ ಇಬ್ಬರು ಗಂಡುಮಕ್ಕಳನ್ನು ಮಧ್ಯಂತರ ಸುಪರ್ದಿಗೆ ಒಪ್ಪಿಸಲು ಸೂಚಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು. ಮೂಲ ಅರ್ಜಿಯ ಬಗ್ಗೆ ಅಂತಿಮ ತೀರ್ಪು ಬರುವವರೆಗೆ ಇಬ್ಬರೂ ಮಕ್ಕಳನ್ನು ತಾಯಿಗೆ ಹಸ್ತಾಂತರಿಸುವಂತೆ ಆದೇಶಿಸಿತು. ತನ್ನ ತವರುಮನೆಯ ಅಜ್ಜ ಅಜ್ಜಿಯರ ಆರೈಕೆಯಲ್ಲಿ ಮಕ್ಕಳು ಬೆಳೆಯಬೇಕು. ಅವರು ಶಾಲೆ ಮತ್ತಿತರ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಮಹಿಳೆಗೆ ಪೀಠ ಸೂಚಿಸಿತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)