Home ಅಂಕಣಗಳು ಮನುವಾದ ಮತ್ತು ಮಹಿಳೆ

ಮನುವಾದ ಮತ್ತು ಮಹಿಳೆ

ನೂರು ವರ್ಷಗಳ ಕಾಲಮಿತಿಯ ಗುರಿಯನ್ನು ಹೊಂದಿದ, ಹಿಂದೂರಾಷ್ಟ್ರದ ಕನಸನ್ನು ಬಿತ್ತಿದ ಆರೆಸ್ಸೆಸ್ ಇನ್ನೇನು ಒಂದೆರಡು ವರ್ಷಗಳ ಒಳಗೆ ಅದನ್ನು ಘೋಷಿಸುವ ಹುಮ್ಮಸ್ಸಿನಲ್ಲಿದೆ. ಆರೆಸ್ಸೆಸ್ ಪ್ರಸ್ತುತಪಡಿಸುವ ಹಿಂದೂ ರಾಷ್ಟ್ರವೆಂದರೆ ಅದು ಮನುಸ್ಮೃತಿಯ ಶಾಸನವನ್ನೊಳಗೊಂಡ ನಕಾರಾತ್ಮಕ ಮತ್ತು ಪ್ರತಿಗಾಮಿತನದ ರೂಪಕದಂತಿದಿರುವುದು.

ಹಿಂದೂರಾಷ್ಟ್ರದ ರಚನೆಯು ನಮಗೆಲ್ಲರಿಗೂ ತಿಳಿದಂತೆ, ಮನುಸ್ಮೃತಿಯು ವರ್ಣಾಶ್ರಮವನ್ನು ಪೋಷಿಸಿ ಉಳಿಸುವ ವ್ಯವಸ್ಥೆಯಾಗಿದೆ. ಪ್ರಸ್ತುತ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಏನಿದ್ದರೂ ಆರೆಸ್ಸೆಸ್ ದ್ವೇಷ ಸಿದ್ದಾಂತವನ್ನು ಜಾರಿಗೊಳಿಸುವ ಪಕ್ಷವಾಗಿ ಉಳಿದಿದೆಯೇ ಹೊರತು ದೇಶದ ಸಂವಿಧಾನವನ್ನು ಎತ್ತಿ ಹಿಡಿಯುವ ಕೂದಲೆಳೆಯಷ್ಟು ಯೋಚನೆಯೂ ಅದಕ್ಕೆ ಇದ್ದಂತೆ ತೋರುತ್ತಿಲ್ಲ. ಏಕೆಂದರೆ ದೇಶದ ಸಂವಿಧಾನವನ್ನು ಹೆಚ್ಚೂ ಕಡಿಮೆ ದಫನಗೈದು ಅಥವಾ ಬಲವಂತದಿಂದ ಏಕಪಪಕ್ಷೀಯವಾಗಿ ತಿದ್ದುಪಡಿಗಳನ್ನು ತಂದು ಸಂವಿಧಾನದ ಮೂಲ ಜಾತ್ಯತೀತ ಸ್ವರೂಪವನ್ನೇ ಬದಲಿಸುವುದು ಇಂದು ಕೇವಲ ಸಂಚಾಗಿ ಉಳಿದಿಲ್ಲ, ಅದು ವಿವಿಧ ಸಂದರ್ಭಗಳಲ್ಲಿ ಬಹಿರಂಗವಾಗಿ ಅಭಿವ್ಯಕ್ತಿಗೊಂಡಿದೆ.

ಇಂತಹ ಅಪಾಯಕಾರಿ ಗುರಿಗಳನ್ನು ಹೊಂದಿದ ಬಿಜೆಪಿಯು ತಾನು ಗುಜರಾತಿನಲ್ಲಿ ಅಧಿಕಾರಾವಧಿಯಲ್ಲಿದ್ದ 2002ರ ವೇಳೆ ನಡೆದ ವಂಶಹತ್ಯೆಗೆ ಸಂಪೂರ್ಣ ಜವಾಬ್ದಾರಿಯಾಗಿದೆ.

ಅಂದು ಗುಜರಾತಿನಲ್ಲಿ ಸಂಘಪರಿವಾರದ ಕಾಲಾಳುಗಳು ನಡೆಸಿದ ವಂಶಹತ್ಯೆ ,ಅತ್ಯಾಚಾರ ಮತ್ತು ಮೆರೆದ ಕ್ರೌರ್ಯವನ್ನು ಕಂಡು ಜಗತ್ತೇ ಬೆಚ್ಚಿಬಿದ್ದಿದೆ. ಅಲ್ಲಿ ನಡೆದದ್ದು ಕೇವಲ ಕೋಮುಗಲಭೆಯಲ್ಲ, ಬದಲಾಗಿ ಬಹಳ ಸುಸೂತ್ರವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ವಂಶಹತ್ಯೆಯಾಗಿತ್ತು ಮತ್ತು ಆಡಳಿತವು ಆ ವೇಳೆ ತನ್ನ ಮೌನ ಸಮ್ಮತಿ ನೀಡಿತ್ತು. ಇನ್ನು ಅಲ್ಲಿ ತಾಂಡವವಾಡಿದ ಆರೆಸ್ಸೆಸ್ ಕಾಲಾಳುಗಳು ಗರ್ಭಿಣಿ ಮಹಿಳೆಯರನ್ನೂ ಬಿಟ್ಟುಬಿಡಲಿಲ್ಲ, ಪುಟ್ಟ ಮಕ್ಕಳು, ವಯಸ್ಕರ ಮೇಲೂ ಕರುಣೆ ತೋರಲಿಲ್ಲ.

2002ರ ಮಾರ್ಚ್ 3ರಂದು ನಡೆದ ಬಿಲ್ಕಿಸ್ ಬಾನು ಮತ್ತು ಇತರ ಮೂವರ ಮೇಲೆ ಅತ್ಯಾಚಾರ ನಡೆಸಿದ ಕೋಮು ಕ್ರಿಮಿಗಳು ನಂತರ ಅವರ ಮೂರು ವರ್ಷದ ಮಗು ಸೇರಿದಂತೆ ಏಳು ಮಂದಿಯನ್ನು ಹತ್ಯೆಗೈದಿದ್ದರು. ದೇಶೀಯ ಮತ್ತು ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳೂ ಸೇರಿದಂತೆ ನಡೆಸಿದ ಸತ್ಯಶೋಧನಾ ವರದಿಗಳು ಗುಜರಾತ್ ವಂಶ ಹತ್ಯೆಯು ಯಾವುದೇ ಯುದ್ಧ ಭೂಮಿಗೆ ಸಮನಾಗುವ ಕ್ರೌರ್ಯ, ಹಿಂಸೆ, ಅತ್ಯಾಚಾರಗಳನ್ನು ಹೊಂದಿತ್ತೆಂದು ತಿಳಿಸಿದೆ.

ಪ್ರಕರಣದಲ್ಲಿ ನ್ಯಾಯಯುತ ತೀರ್ಪು ಹೊರಬರಬೇಕೆಂಬ ಉದ್ದೇಶದಿಂದ ಅಂದು ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಂಬೈ ಕೋರ್ಟಿಗೆ ವರ್ಗಾಯಿಸಿತ್ತು. ತನಿಖೆ ನಡೆಸಿದ ಮುಂಬೈ ಕೋರ್ಟ್ 11ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟಿಗೆ ಅಹವಾಲು ಸಲ್ಲಿಸಿದ ಕಾರಣ ರಾಜ್ಯ ಸರಕಾರ ನೇಮಕಗೊಳಿಸಿದ ಸಮಿತಿಯ ಶಿಫಾರಸ್ಸಿನಂತೆ ಅಪರಾಧಿಗಳನ್ನು ಬಿಡುಗಡೆಗೊಳಿಸಿದೆ.

ಒಟ್ಟಿನಲ್ಲಿ ಇವೆಲ್ಲವೂ ಮನುವಾದ ಸಿದ್ಧಾಂತವನ್ನು ಜಾರಿಗೊಳಿಸುವ ಆರೆಸ್ಸೆಸ್-ಬಿಜೆಪಿಯ ಉದ್ದೇಶವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅವರದೇ ಸಂಘಪರಿವಾರದ ನಾಯಕರ ಮಾತಿನಂತೆ, ಬ್ರಾಹ್ಮಣರು ಸಂಸ್ಕಾರವಂತರು, ಆದ್ದರಿಂದ ಅವರು ಬಿಡುಗಡೆಗೆ ಅರ್ಹರು. ಇದು ಸಂವಿಧಾನವನ್ನು ಇರುಳಿಗೆ ತಳ್ಳಿ ತಾವು ಜಾರಿಗೊಳಿಸುವ ಮನುವಾದ ಪ್ರೇರಿತ ಸಮಾಜದ ಯಜಮಾನಿಕೆಯನ್ನು ಶೂದ್ರರು, ದಲಿತರು, ಅಲ್ಪಸಂಖ್ಯಾತರು, ಮತ್ತು ನಾಸ್ತಿಕರನ್ನೊಳಗೊಂಡ ಒಟ್ಟು ಜನತೆ ಬಾಯ್ಮುಚ್ಚಿ ಒಪ್ಪಿಕೊಳ್ಳಬೇಕು ಅನ್ನುವ ಕೆಟ್ಟ ಸಂದೇಶವನ್ನು ನೀಡುತ್ತಿದೆ. ಈ ಮೂಲಕ ವೇದಗಳ ಕಾಲದಿಂದಲೂ ಅನೂಚಾನವಾಗಿ ನಡೆದು ಬಂದ ಮಹಿಳೆಯರ ಮೇಲಿನ ದಬ್ಬಾಳಿಕೆ, ಅತ್ಯಾಚಾರ, ಕೆಳಜಾತಿಯ ಮಹಿಳೆಯರ ಮೇಲಿನ ಮೇಲ್ಜಾತೀಯ ಗಂಡುಗಳ ಅಲಿಖಿತ ಲೈಂಗಿಕ ಅಧಿಕಾರ…ಇವೆಲ್ಲವೂ ಆಧುನಿಕ ಕಾಲದಲ್ಲೂ ಮುಂದುವರಿಯಲಿದೆ ಎಂಬ ಭೀಕರ ಸಂಜ್ಞೆಯನ್ನು ಗುಜರಾತ್, ಹಥ್ರಾಸ್, ಕಥುವಾ , ಉನ್ನಾವೋ ಮೊದಲಾದ ಪ್ರಕರಣಗಳು ನೀಡುತ್ತಿವೆ.

ಟಿಪ್ಪೂವಿನ ಕಾಲದಲ್ಲಿ ಕೇರಳದಲ್ಲಿದ್ದ ಸ್ತನ ಕರದಂತಹ ಅನಾಗರಿಕ, ಅಮಾನವೀಯ ಪದ್ಧತಿಗಳನ್ನು ರದ್ದುಗೊಳಿಸಿದ ಟಿಪ್ಪೂ ತಳಸ್ತರದ ಮಹಿಳೆಯರಿಗೆ ಸಾಮಾಜಿಕ ಘನತೆಯನ್ನು ಖಾತರಿಸಿ ಪಡಿಸಿದ್ದನು. ಆದರೆ ಆಧುನಿಕ ಸೋಗಿನ ಮುಖವಾಡ ಧರಿಸಿದ ಅದೇ ಮೇಲ್ಜಾತಿ ವರ್ಗಗಳು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಮುಂದುವರಿಸಿದ್ದಾರೆ. ಇದೇ ಕಾರಣಕ್ಕಾಗಿ ಟಿಪ್ಪೂ ಇವರ ಕಣ್ಣಿನಲ್ಲಿ ಹಿಂದೂ ವಿರೋಧಿಯಾಗಿದ್ದಾನೆ! ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರವು ಮಹಿಳೆಯರ ಮೇಲೆ ನಡೆಸುವ ಅತ್ಯಾಚಾರವನ್ನು ಆಧುನಿಕ ಜಗತ್ತಿನ ಸಂಸ್ಕಾರವೆಂದು ಬಣ್ಣಿಸಿದೆ. ಅದರೊಂದಿಗೆ ಆರೆಸ್ಸೆಸ್- ಬಿಜೆಪಿ ಇನ್ನಷ್ಟು, ಮತ್ತಷ್ಟೂ ಬಿಲ್ಕಿಸ್ ಬಾನುಗಳು ಸೃಷ್ಟಿಯಾಗಲಿರುವ ಕೆಟ್ಟ ಸಂದೇಶವನ್ನು ನೀಡುತ್ತಿದೆ. ಜಾತ್ಯತೀತ ಪಕ್ಷಗಳು, ಕಾನೂನು ತಜ್ಞರು, ಹೋರಾಟಗಾರರು ಮತ್ತು ದೇಶವನ್ನು ಪ್ರೀತಿಸುವ ಭಾರತೀಯರು ಪ್ರಜಾಸತ್ತೆಯನ್ನು ಬಲಪಡಿಸಿ ಸ್ವಾತಂತ್ರ್ಯಕ್ಕಾಗಿ ಒಂದಾಗಿ ಹೋರಾಡದಿದ್ದರೆ ಮುಂದಿನ ದಿನಗಳು ಮತ್ತಷ್ಟು ಭಯಾನಕವಾಗಲಿವೆ.

Join Whatsapp
Exit mobile version