ಗಂಗೊಳ್ಳಿ: ಸಮುದ್ರದಲ್ಲಿ ಮೀನುಗಳ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಮತ್ತು ಮೀನುಗಳ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರವು ಬಂಡೆ ಸಾಲು ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಹೇಳಿದರು.
ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಡೆದ ಪರಿಹಾರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಸಮುದ್ರದಲ್ಲಿ ಮೀನುಗಳು ಮರಿ ಹಾಕುವ ಪ್ರಕ್ರಿಯೆಯಿಂದ ಆರಂಭಗೊಂಡು ಮೀನುಗಳು ಬಲಿಷ್ಠವಾಗುವಲ್ಲಿಯವರೆಗೂ ಇತ್ತೀಚಿನ ದಿನಗಳಲ್ಲಿ ತೊಂದರೆಗೆ ಒಳಗಾಗುತ್ತಿದ್ದು ಸಮುದ್ರ ಮೀನುಗಳ ಸಂರಕ್ಷಣೆಗೆ ಸುಮಾರು 5 ಮೀಟರ್ ಆಳದಿಂದ 10 ಮೀಟರ್ ಆಳದವರೆಗೆ ಸಮುದ್ರದಲ್ಲಿ ಕೃತಕ ಬಂಡೆಸಾಲುಗಳನ್ನು ನಿರ್ಮಿಸುವ ಮೂಲಕ ಮೀನು ಸಂರಕ್ಷಣಾ ಯೋಜನೆಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.