ಬಾಬಾ ಸಾಹೇಬರ ಸಂವಿಧಾನವನ್ನು ನಾಶ ಮಾಡುವುದೇ ಬಿಜೆಪಿಯ ಅಂತಿಮ ಗುರಿ: ಕಾಂಗ್ರೆಸ್
ಬೆಂಗಳೂರು: ಸಂವಿಧಾನ ತಿದ್ದುಪಡಿ ಕುರಿತು ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಯಿಂದ ರಾಜ್ಯ ಬಿಜೆಪಿ ಘಟಕ ಅಂತರ ಕಾಯ್ದುಕೊಂಡಿದೆ. ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ತಿದ್ದುಪಡಿ ಹೇಳಿಕೆ ಅವರ ‘ವೈಯಕ್ತಿಕ ಅಭಿಪ್ರಾಯ’ ಮತ್ತು ಅವರಿಂದ ಈ ಬಗ್ಗೆ ವಿವರಣೆ ಪಡೆಯುವುದಾಗಿ ರಾಜ್ಯ ಬಿಜೆಪಿ ಹೇಳಿದೆ.
ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿ “ಸಂವಿಧಾನದ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು. ಮತ್ತು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಮತ್ತು ಈ ಬಗ್ಗೆ ವಿವರಣೆಯನ್ನು ಅವರಿಂದ ಪಡೆದುಕೊಳ್ಳುತ್ತೇವೆ. ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ಬಿಜೆಪಿ ಪುನರುಚ್ಚರಿಸುತ್ತದೆ” ಎಂದು ಪೋಸ್ಟ್ ಮಾಡಿದೆ.
ಕಾಂಗ್ರೆಸ್ ಕಿಡಿ
ಸಂವಿಧಾನ ಬದಲಿಸಲು 400 ಸ್ಥಾನಗಳು ಬೇಕು ಎಂಬ ಬಿಜೆಪಿ ಸಂಸದರ ಹೇಳಿಕೆ ನರೇಂದ್ರ ಮೋದಿ ಮತ್ತು ಅವರ ‘ಸಂಘ ಪರಿವಾರ’ದ ಗುಪ್ತ ಉದ್ದೇಶಗಳ ಬಹಿರಂಗ ಘೋಷಣೆಯಾಗಿದೆ. ಬಾಬಾ ಸಾಹೇಬರ ಸಂವಿಧಾನವನ್ನು ನಾಶ ಮಾಡುವುದೇ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿಯಾಗಿದೆ. ಅವರು ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಮಾಜವನ್ನು ವಿಭಜಿಸುವ ಮೂಲಕ, ಮಾಧ್ಯಮವನ್ನು ಗುಲಾಮರನ್ನಾಗಿ ಮಾಡುವ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ, ವಿರೋಧವನ್ನು ತೊಡೆದುಹಾಕಲು ಸಂಚು ರೂಪಿಸುವ ಮೂಲಕ ಭಾರತದ ಮಹಾನ್ ಪ್ರಜಾಪ್ರಭುತ್ವವನ್ನು ಸಂಕುಚಿತ ಸರ್ವಾಧಿಕಾರವಾಗಿ ಪರಿವರ್ತಿಸಲು ಹೊರಟಿದ್ದಾರೆ. ಸ್ವಾತಂತ್ರ್ಯ ಸೇನಾನಿಗಳ ಕನಸುಗಳ ಜೊತೆಗಿನ ಈ ಷಡ್ಯಂತ್ರಗಳನ್ನು ನಾವು ಯಶಸ್ವಿಯಾಗಲು ಬಿಡುವುದಿಲ್ಲ ಮತ್ತು ನಮ್ಮ ಕೊನೆಯ ಉಸಿರು ಇರುವವರೆಗೂ ಸಂವಿಧಾನದ ಆಶಯಗಳು ಹಾಗು ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸುತ್ತೇವೆ. ಸಂವಿಧಾನವನ್ನು ಬದಲಿಸುತ್ತೇವೆ, ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿಗೆ ಸಂವಿಧಾನದ ಯಾವ ಭಾಗ, ಯಾವ ಅಂಶ, ಯಾವ ಅನುಚ್ಚೇದ, ಯಾವ ಕಲಂ ಬಗ್ಗೆ ಅಸಹನೆ ಹೊಂದಿದೆ ಎಂದು ಹೇಳಬೇಕು? ಸಂವಿಧಾನದಲ್ಲಿರುವ • ಸ್ವತಂತ್ರದ ಹಕ್ಕಿನ ಬಗ್ಗೆ ಆಕ್ಷೇಪಣೆಯೇ? • ಸಮಾತೆ, ಸಮಾನತೆ ಬೇಡವಾಗಿದೆಯೇ? • ಶೋಷಣೆಯ ವಿರುದ್ಧದ ಹಕ್ಕು ಇರಬಾರದೇ? • ಧಾರ್ಮಿಕ ಸ್ವತಂತ್ರದ ಹಕ್ಕು ಇರಬಾರದೇ? • ವಾಕ್ ಹಾಗೂ ಅಭಿವ್ಯಕ್ತಿ ಸ್ವತಂತ್ರ ಬೇಡವೇ? • ಶಿಕ್ಷಣದ ಹಕ್ಕು ಅಪರಾಧವೇ? ಯಾವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದಬೇಕು ಎಂಬುದನ್ನು ಬಿಜೆಪಿ ಹೇಳಬೇಕು, ಇಲ್ಲವೇ ಅನಂತಕುಮಾರ್ ಹೆಗಡೆ ಎಂಬ ಕೀಚಕನನ್ನು ಪಕ್ಷದಿಂದ ಕಿತ್ತುಹಾಕಿ ಆತನ ಪರವಾಗಿ ಕ್ಷಮೆ ಯಾಚಿಸಬೇಕು. ನಾಲ್ಕೂವರೆ ವರ್ಷ ಮಲಗಿದ್ದು, ಚುನಾವಣೆಗಾಗಿ ಎದ್ದು ಬರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಎಂಬ ಕ್ರಿಮಿ ಸಂಸತ್ತಿನಲ್ಲಿ ಕರ್ನಾಟಕದ ಪರ, ತನ್ನ ಕ್ಷೇತ್ರದ ಪರ ಮಾತಾಡಿದ ಇತಿಹಾಸವೇ ಇಲ್ಲ. ದಲಿತರನ್ನು ಬೊಗಳುವ ನಾಯಿಗಳು ಎಂದು ಅವಮಾನಿಸಿದ್ದ ಈ ಕೋಮುಕ್ರಿಮಿಯನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಮೂಲಕ ಬಿಜೆಪಿ ಪಕ್ಷ ದಲಿತ ವಿರೋಧಿ, ಸಂವಿಧಾನ ವಿರೋಧಿ ಎಂದು ಸಾಬೀತು ಮಾಡಿದೆ. ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಈ ದೇಶದಲ್ಲಿ ರಾಜಕೀಯ ಮಾಡುವುದಕ್ಕೆ, ಅಸ್ತಿತ್ವದಲ್ಲಿ ಇರುವುದಕ್ಕೆ ಬಿಜೆಪಿಗೆ ಅರ್ಹತೆ ಇಲ್ಲ. ದಲಿತರ ವಿರುದ್ಧ, ಸಂವಿಧಾನದ ವಿರುದ್ಧ ಸದಾ ಕಿಡಿಕಾರುವ ಬಿಜೆಪಿಯನ್ನು ಈ ರಾಜ್ಯದ ಹಾಗೂ ದೇಶದ ಜನ ತಿರಸ್ಕರಿಸುವುದು ಖಚಿತ ಎಂದು ಆಕ್ರೋಶ ವ್ಯಕ್ತಪಡಿಸಿದೆ.