Home ಟಾಪ್ ಸುದ್ದಿಗಳು ಮಂಗಳೂರು: ರನ್ ವೇಯಿಂದ ಮನೆಗಳಿಗೆ ನುಗ್ಗುತ್ತಿದೆ ನೀರು…!

ಮಂಗಳೂರು: ರನ್ ವೇಯಿಂದ ಮನೆಗಳಿಗೆ ನುಗ್ಗುತ್ತಿದೆ ನೀರು…!

ವಿಮಾನ ನಿಲ್ದಾಣ ಮುಖ್ಯದ್ವಾರ ಬಂದ್ ಮಾಡಿ ಸ್ಥಳೀಯರ ಪ್ರತಿಭಟನೆ

ಮಂಗಳೂರು: ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣದ ರನ್ ವೇಯಿಂದ ಹರಿದು ಬಂದ ನೀರು ಏಳು ಮನೆಗಳಿಗೆ ಹಾನಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಕರಂಬಾರ ಸ್ಥಳೀಯರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.


ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಲು ಏರ್ಪೋರ್ಟ್ ಆಡಳಿತ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಹಿಗಾಗಿ ಕೆಂಜಾರು ಹಾಗೂ ಏರ್ಪೋರ್ಟ್ ಸುತ್ತಮುತ್ತಲಿನ ಹಲವು ಮನೆಗಳಿಗೆ ನೆರೆ ಭೀತಿ ಸೃಷ್ಟಿಯಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸದೆ ಮಳೆ ನೀರನ್ನು ಅವೈಜ್ಞಾನಿಕವಾಗಿ ಹೊರ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಟೇಬಲ್ ಟಾಪ್ ಏರ್ಪೋರ್ಟ್ ಆಗಿರುವ ಕಾರಣ ಕೆಲ ಭಾಗದ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಈ ಮಧ್ಯೆ, ರಸ್ತೆ ತಡೆ ನಡೆಸಿದ ಕಾರಣ ಬಜ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.


ಸದ್ಯ ಗ್ರಾಮಸ್ಥರನ್ನು ಮನವೊಲಿಸಿ ರಸ್ತೆ ತೆರವು ಮಾಡಲಾಗಿದೆ. ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲು ಒಂದು ಗಂಟೆಯ ಗಡುವು ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ನಾಯಕ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ ನೀಡಿದ್ದಾರೆ. ಏರ್ಪೋರ್ಟ್ ಆಡಳಿತ ಅಧಿಕಾರಿಗಳು, ಸ್ಥಳೀಯರ ಜೊತೆ ಶಾಸಕ ಭರತ್ ಶೆಟ್ಟಿ ಚರ್ಚೆ ನಡೆಸಿದ್ದಾರೆ.

Join Whatsapp
Exit mobile version