ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪರಿಷತ್ ನ ತೀರ್ಮಾನದಂತೆ ಕುಡಿಯುವ ನೀರಿನ ದರ ಕಡಿಮೆಗೊಳಿಸುವ ಪ್ರಸ್ತಾವನೆಗೆ ಸರ್ಕಾರವು ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಎಂದು ಪಾಲಿಕೆ ತಿಳಿಸಿದೆ.
ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಸರ್ಕಾರದ ಮಾನದಂಡದಂತೆ ವಿಧಿಸಲಾಗಿರುವ ಕುಡಿಯುವ ನೀರಿನ ದರವು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಪರಿಗಣಿಸಿ ಕುಡಿಯುವ ನೀರಿನ ದರವನ್ನು ಪರಿಷ್ಕರಿಸುವಂತೆ ಈ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾದ ಮೊದಲ ಪ್ರಸ್ತಾವನೆಯು ತಿರಸ್ಕಾರಗೊಂಡಿತ್ತು.
ಆದರೆ ಈ ನೀರಿನ ದರದ ಬಗ್ಗೆ ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ದರವನ್ನು ಕಡಿಮೆಗೊಳಿಸುವುದು ಅತ್ಯಾವಶಕವೆಂದು ಪರಿಗಣಿಸಿ ನೀರಿನ ದರ ಪರಿಷ್ಕರಣೆಯಿಂದ ಪಾಲಿಕೆಗೆ ಆಗಬಹುದಾದ ಆರ್ಥಿಕ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಆದಾಯ ಅಥವಾ ನಷ್ಟ ಆಗದಂತೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ದರ ನಿಗದಿಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಪಾಲಿಕೆಯ ಮಹತ್ತರ ಜವಾಬ್ದಾರಿಯಾಗಿರುತ್ತದೆ.
ಅದರಂತೆ ಕುಡಿಯುವ ನೀರಿನ ದರ ಪರಿಷ್ಕರಣೆ ಬಗ್ಗೆ ಮೇ 2022 ರಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿ, ಕುಡಿಯುವ ನೀರಿನ ದರವನ್ನು ಕಡಿಮೆಗೊಳಿಸುವ ಬಗ್ಗೆ ತೀರ್ಮಾನಿಸಲಾಗಿ ಸಲ್ಲಿಸಲಾದ ಪರಿಷ್ಕೃತ ಪ್ರಸ್ತಾವನೆಗೆ ಪರಿಷತ್ತಿನಲ್ಲಿ ಅಂಗೀಕರಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿತ್ತು. ಸರ್ಕಾರ ಇದಕ್ಕೆ ಅನುಮೋದನೆ ನೀಡಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುಡಿಯುವ ನೀರಿನ ದರ ಪರಿಷ್ಕರಣೆ ಬಗ್ಗೆ ಆದೇಶ ಹೊರಡಿಸಲು ಸಹಕರಿಸಿದ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಹಾಗೂ ನಗರದ ಶಾಸಕರಗಳನ್ನು ಪಾಲಿಕೆಯ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಪಾಲಿಕೆ ತಿಳಿಸಿದೆ.