Home ಟಾಪ್ ಸುದ್ದಿಗಳು ಕೊಡವರ ನಿಂದನೆ: ನೈಜ ಆರೋಪಿಯನ್ನು ಬಂಧಿಸಿ ಸಂಭಾವ್ಯ ಗಲಭೆ ತಪ್ಪಿಸಿದ ಪೊಲೀಸರ ಕ್ರಮ ಶ್ಲಾಘನಾರ್ಹ: ಪಿಎಫ್ಐ

ಕೊಡವರ ನಿಂದನೆ: ನೈಜ ಆರೋಪಿಯನ್ನು ಬಂಧಿಸಿ ಸಂಭಾವ್ಯ ಗಲಭೆ ತಪ್ಪಿಸಿದ ಪೊಲೀಸರ ಕ್ರಮ ಶ್ಲಾಘನಾರ್ಹ: ಪಿಎಫ್ಐ

ಬೆಂಗಳೂರು: ಕೊಡವ ಸಮುದಾಯದ ಮಹಿಳೆಯರನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ ದಿವಿನ್ ದೇವಯ್ಯ ಎಂಬ ಕಿಡಿಗೇಡಿಯನ್ನು ಬಂಧಿಸಿ ಸಂಘಪರಿವಾರದ ಕೋಮು ಗಲಭೆಯ ಷಡ್ಯಂತ್ರವನ್ನು ವಿಫಲಗೊಳಿಸಿದ ಮಡಿಕೇರಿ ಪೊಲೀಸರ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಕೊಡವ ಸಮಾಜದ ಮಹಿಳೆಯರನ್ನು ಅವಹೇಳನ ಮಾಡಿ ಅಪರಿಚಿತ ಖಾತೆಯಿಂದ ಪೋಸ್ಟ್ ಹಾಕಲಾಗಿತ್ತು. ನಂತರ ಇದಕ್ಕೆ ಸಂಬಂಧವಿಲ್ಲದ ಅಮಾಯಕ ಮುಸ್ಲಿಮ್ ಯುವಕನ ಫೋಟೋ ಎಡಿಟ್ ಮಾಡಿ ವ್ಯಾಪಕವಾಗಿ ಹರಡಿ ಆತನಿಗೆ ಮಾನಸಿಕ ಕಿರುಕುಳ ನೀಡಲಾಗಿತ್ತು. ಮುಸ್ಲಿಮ್ ಯುವಕನ ಫೋಟೋ ಕಂಡ ತಕ್ಷಣ ಚಾತಕಪಕ್ಷಿಯಂತೆ ಹೊಂಚು ಹಾಕಿ ಕುಳಿತ್ತಿದ್ದ ಸಂಘಪರಿವಾರ ಸಂಘಟನೆಗಳು ಜಿಲ್ಲಾದ್ಯಂತ ಪ್ರತಿಭಟನೆಗೆ ಕರೆಕೊಟ್ಟು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿ ಗಲಭೆ ಸೃಷ್ಟಿಸಲು ಷಡ್ಯಂತ್ರ ರೂಪಿಸಿದ್ದರು. ಆದರೆ ಪೊಲೀಸರ ಸಮಯೋಚಿತ ಮತ್ತು ನಿಷ್ಪಕ್ಷಪಾತ ತನಿಖೆಯಿಂದ ನೈಜ ಆರೋಪಿ ದಿವಿನ್ ದೇವಯ್ಯನ ಬಂಧನವಾಗುವುದರೊಂದಿಗೆ ದೊಡ್ಡಮಟ್ಟದ ಅನಾಹುತವೊಂದು ತಪ್ಪಿ ಹೋದಂತಾಗಿದೆ. ಈ ಹಿಂದೆ ಬೆಳಗಾವಿಯಲ್ಲೂ ಮುಸ್ಲಿಮ್ ಹೆಸರಿನ ಖಾತೆಯ ಮೂಲಕ ಬಿಜೆಪಿ ಶಾಸಕನಿಗೆ ಬೆದರಿಕೆಯೊಡ್ಡಿದ ಘಟನೆ ನಡೆದಿತ್ತು. ಅಸಲಿಗೆ ಅದು ಸಿದ್ಧಾರೂಢ್ ಶ್ರೀಕಾಂತ್ ಎಂಬಾತನದ್ದೆಂದು ತನಿಖೆಯಲ್ಲಿ ಬಯಲಾಗಿತ್ತು. ನಕಲಿ ಖಾತೆಯ ಮೂಲಕ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹುಟ್ಟು ಹಾಕಿ ಗಲಭೆ ಸೃಷ್ಟಿಸುವುದು ಸಂಘಪರಿವಾರದ ವ್ಯವಸ್ಥಿತ ಕಾರ್ಯವಿಧಾನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕಿಡಿಗೇಡಿ ದಿವಿನ್ ದೇವಯ್ಯನ ಹಿಂದೆ ಅಡಗಿರುವ ಪಿತೂರಿಕೋರರನ್ನು ಕೂಡಲೇ ಬಹಿರಂಗಪಡಿಸಬೇಕು. ದ್ವೇಷ ಹರಡುವ ಇಂತಹ ಸೋಷಿಯಲ್ ಮೀಡಿಯಾ ಖಾತೆಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಪ್ರಕರಣ ದಾಖಲಿಸಬೇಕು. ಅನ್ಯಾಯವಾಗಿ ಕಿರುಕುಳ ಅನುಭವಿಸಿದ ಸಂತ್ರಸ್ತ ಯುವಕನಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಕಿಡಿಗೇಡಿಗಳ ಷಡ್ಯಂತ್ರವನ್ನು ಮಟ್ಟ ಹಾಕಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಖಾತರಿಪಡಿಸಬೇಕೆಂದು ಅಯ್ಯೂಬ್ ಅಗ್ನಾಡಿ ಆಗ್ರಹಿಸಿದ್ದಾರೆ. ಮಾತ್ರವಲ್ಲ ದೇಶದ ಉಜ್ವಲ ಭವಿಷ್ಯವಾಗಬೇಕಾದ ಯುವಕರು, ಪರಸ್ಪರ ಧರ್ಮಗಳ ನಡುವೆ ದ್ವೇಷ ಹರಡುವ ಕೃತ್ಯದಲ್ಲಿ ತೊಡಗಿರುವ ಸ್ಥಾಪಿತ ಹಿತಾಸಕ್ತಿಗಳ ದಾಳವಾಗಿ ಬಳಕೆಯಾಗದೇ, ದೇಶ ಕಟ್ಟುವ ಕೆಲಸದಲ್ಲಿ ಅವರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ನಾಗರಿಕರ ಸಮುದಾಯವು ಗಮನಹರಿಸಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Join Whatsapp
Exit mobile version