Home ಟಾಪ್ ಸುದ್ದಿಗಳು ಮಂಗಳೂರಿನಲ್ಲಿ ಮುಂದುವರಿದ ಮನೆ ದರೋಡೆ: ಮಾರಕಾಯುಧ ಪ್ರದರ್ಶಿಸಿ ಕೃತ್ಯ; ಕಾರು ಸಹಿತ ಪರಾರಿ

ಮಂಗಳೂರಿನಲ್ಲಿ ಮುಂದುವರಿದ ಮನೆ ದರೋಡೆ: ಮಾರಕಾಯುಧ ಪ್ರದರ್ಶಿಸಿ ಕೃತ್ಯ; ಕಾರು ಸಹಿತ ಪರಾರಿ

►‘ಚಡ್ಡಿ’ ಗ್ಯಾಂಗ್’ನ ಕೃತ್ಯದ ಶಂಕೆ: ಆತಂಕದಲ್ಲಿ ಸಾರ್ವಜನಿಕರು

ಮಂಗಳೂರು: ವೃದ್ಧ ದಂಪತಿ ವಾಸವಿರುವ ಮನೆಯೊಂದಕ್ಕೆ ಸೋಮವಾರ ರಾತ್ರಿ ನುಗ್ಗಿದ ಕಳ್ಳರು ಕಾರು, ಚಿನ್ನಾಭರಣವನ್ನು ಕದ್ದೊಯ್ದ ಘಟನೆ ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ನಡೆದಿದೆ.


ಕಳ್ಳರು ವೃದ್ಧ ದಂಪತಿ ವಾಸವಿರುವ ಮನೆಯೊಂದಕ್ಕೆ ಪ್ರವೇಶಿಸಿ, ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ.

ದರೋಡೆಯ ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಆರೋಪಿಗಳು ಪರಾರಿಯಾದ ಕಾರು ಮುಲ್ಕಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿದ್ದ ವೃದ್ಧ ದಂಪತಿಯ ಮಕ್ಕಳು ವಿದೇಶದಲ್ಲಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ದರೋಡೆಯ ವೇಳೆ ವೃದ್ಧ ದಂಪತಿಗೆ ಹಲ್ಲೆಗೈದಿದ್ದು, ಅವರಿಗೆ ಗಾಯವುಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ. ಸದ್ಯಕ್ಕೆ ದೊರೆತಿರುವ ಮಾಹಿತಿಯ ಪ್ರಕಾರ, ಇದು ದರೋಡೆಕೋರರ ಮೊಬೈಲ್ ಆಗಿರುವ ಸಾಧ್ಯತೆ ಇದ್ದು, ಪರಾರಿಯಾಗುವ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರಬಹುದೆಂದು ಅಂದಾಜಿಸಲಾಗಿದೆ.

ಅಲ್ಲದೇ ಮತ್ತೊಂದೆಡೆ ನಗರದ ಪಂಪ್ ವೆಲ್ ಕಪಿತಾನಿಯೋ ಶಾಲೆಯ ಬಳಿ ಇರುವ ಹಮ್ಮಬ್ಬ ಎಂಬುವವರ ಬಿಎಚ್ ಸ್ಟೋರ್’ಗೆ ನಿನ್ನೆ ರಾತ್ರಿ ನುಗ್ಗಿದ ಇಬ್ಬರು ಕಳ್ಳರು ನಗದು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಅರಿತ ಬಳಿಕ ಕಂಕನಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮಹಜರು ನಡೆಸಿದ್ದಾರೆ.


ಕಳೆದ ಶನಿವಾರ ನಗರದ ಕೋಡಿಕಲ್ ಬಳಿ ಮನೆಯೊಂದರ ಕಿಟಕಿ ಮುರಿದು ಕಳವು ಕೃತ್ಯ ನಡೆದಿತ್ತು. ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಉತ್ತರ ಭಾರತ ಮೂಲದ ಚಡ್ಡಿ ಗ್ಯಾಂಗ್ ನ ಕೃತ್ಯ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Join Whatsapp
Exit mobile version