Home ಟಾಪ್ ಸುದ್ದಿಗಳು ಮಂಗಳೂರು: ಪತಿಯಿಂದಲೇ ಚಿನ್ನಾಭರಣ ಕಳವು, ಪತ್ನಿಯಿಂದ ದೂರು

ಮಂಗಳೂರು: ಪತಿಯಿಂದಲೇ ಚಿನ್ನಾಭರಣ ಕಳವು, ಪತ್ನಿಯಿಂದ ದೂರು

ಮಂಗಳೂರು: ಫ್ಲ್ಯಾಟ್‌ನ ಕಪಾಟಿನಲ್ಲಿರಿಸಿದ ಚಿನ್ನಾಭರಣವನ್ನು ಪತಿಯೇ ಕಳವುಗೈದ ಬಗ್ಗೆ ಕದ್ರಿ ಪೊಲೀಸ್‌ ಠಾಣೆಗೆ ಪತ್ನಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪತಿ ಮತ್ತು ಆತನಿಗೆ ಸಹಕರಿಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

ಇಲಿಯಾಸ್‌ ಮತ್ತು ಪ್ರಭಾಕರ್‌ ಪ್ರಕರಣದ ಆರೋಪಿಗಳು.

ಪ್ರಕರಣದ ವಿವರ:

ಮಹಿಳೆಯ ಬಳಿ ತಾಯಿ ಮನೆ, ಪತಿ ಮನೆಯವರು ಮದುವೆ ಸಂದರ್ಭ ನೀಡಿದ ಚಿನ್ನ ಸೇರಿದಂತೆ ಒಟ್ಟು 75 ಪವನ್‌ ಚಿನ್ನವಿದ್ದು, ಅದನ್ನು ತಾವು ವಾಸಿಸುತ್ತಿದ್ದ ಕೆ.ಪಿ.ಟಿ. ವ್ಯಾಸ ನಗರದ ಶಾಂತಲಾ ಆಶಿಯಾನ ಫ್ಲಾಟ್‌ನ ಕಪಾಟಿನಲ್ಲಿ ಭದ್ರವಾಗಿರಿಸಿದ್ದರು. ಈ ವಿಷಯ ಮಹಿಳೆ ಮತ್ತು ಅವರ ಗಂಡನಾದ ಇಲಿಯಾಸ್‌ನಿಗೆ ಮಾತ್ರ ತಿಳಿದಿತ್ತು.

2023 ರ ಏಪ್ರಿಲ್‌ ತಿಂಗಳಿನಲ್ಲಿ ಮಹಿಳೆ ಮತ್ತು ಅವರ ಗಂಡನಿಗೆ ಜಗಳವಾಗಿ ಮಹಿಳೆ ಮನೆಯಿಂದ ಹೊರ ಬಂದು ತಾಯಿ ಮನೆಯಲ್ಲಿ ವಾಸವಿರುತ್ತಿದ್ದರು. ವಾರಕ್ಕೊಮ್ಮೆ ಫ್ಲಾಟ್‌ಗೆ ಹೋಗಿ ಬರುತ್ತಿದ್ದು, ಸುಮಾರು ಒಂದು ತಿಂಗಳ ನಂತರ ಫ್ಲ್ಯಾಟ್‌ಗೆ ಹೋಗಿ ವಾಚ್‌ಮ್ಯಾನ್‌ ಬಳಿ ವಿಚಾರಿಸಿದಾಗ ಅವರ ಗಂಡ ಒಂದು ವಾರದಿಂದ ಫ್ಲ್ಯಾಟ್‌ಗೆ ಬಂದಿಲ್ಲ ಎಂದು ತಿಳಿಸಿದರು.

ಈ ಸಂದರ್ಭ ದೂರುದಾರ ಮಹಿಳೆ ಅನುಮಾನಗೊಂಡು ಮನೆಯ ಬಂಗಾರವಿಟ್ಟ ಲಾಕರ್‌ ಕಪಾಟಿನಲ್ಲಿ ನೋಡಿದಾಗ ಲಾಕರ್‌ ಸಮೇತ ಚಿನ್ನವಿರಲಿಲ್ಲ. ಈ ಸಂದರ್ಭ ಗಂಡನಿಗೆ ಕರೆ ಮಾಡಿದಾಗ ‘ನಾನು ಲಾಕರ್‌ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿರುತ್ತೇನೆ. ನಿನಗೆ ಏನು ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ. ಅಲ್ಲದೆ ಚಿನ್ನವನ್ನು ಬ್ಯಾಂಕಿನಲ್ಲಿ ಸುಮಾರು 28.5 ಲಕ್ಷಕ್ಕೆ ಅಡವಿಟ್ಟು ಹಣ ಪಡೆದುಕೊಂಡಿರುವುದಾಗಿ ಹಾಗೂ ಅದಕ್ಕೆ ಬಡ್ಡಿ ಕಟ್ಟಲು ಆಗದೇ ಪ್ರಭಾಕರ್‌ ಎಂಬವರಿಗೆ 3 ತಿಂಗಳ ಮಟ್ಟಿಗೆ ಬಡ್ಡಿಯನ್ನು ಕಟ್ಟಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾನೆ.

ಅಡವಿಟ್ಟ ಚಿನ್ನದಲ್ಲಿ ಪ್ರಭಾಕರನು ಮೂರು ತಿಂಗಳಾಗುವ ಮೊದಲು ಸುಮಾರು 12 ಲಕ್ಷದಷ್ಟು ಚಿನ್ನವನ್ನು ಬಿಡಿಸಿ ಕರಗಿಸಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ದೂರುದಾರ ಮಹಿಳೆ ಅವರು ಕದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Join Whatsapp
Exit mobile version