ಮಂಗಳೂರು: ನಗರದಲ್ಲಿ ಈಚೆಗೆ ವಿದ್ಯುದಾಘಾತದಿಂದ ಇಬ್ಬರು ಮೃತಪಟ್ಟಿದ್ದಕ್ಕೆ ತಂತಿ ಸಮೀಪದ ಮರಗಳ ಕೊಂಬೆ ಕತ್ತರಿಸದಿದ್ದುದೂ ಕಾರಣ. ವಿದ್ಯುತ್ ತಂತಿಯನ್ನು ಸ್ಪರ್ಶಿಸುವ ಮರಗಳ ತೆರವಿಗೆ ಮೀನಮೇಷ ಎಣಿಸುವುದು ಏಕೆ. ಸಂವಹನ ಕ್ಷೇತ್ರದಲ್ಲಿ ಇಷ್ಟೆಲ್ಲ ಸುಧಾರಣೆ ಆಗಿರುವಾಗಲೂ, ಆಧುನಿಕ ಸಲಕರಣೆಗಳು ಲಭ್ಯವಿದ್ದರೂ ಇಂತಹ ಅವಘಡ ತಪ್ಪಿಸಲು ಸಾಧ್ಯವಾಗುತ್ತಿಲ್ಲ ಏಕೆ’ ಎಂದು ಸ್ಪೀಕರ್, ಶಾಸಕ ಯುಟಿ ಖಾದರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟಿದ್ದು, ಇಂತಹ ಅವಘಡ ತಪ್ಪಿಸಲು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಚರ್ಚಿಸಲು ಮೆಸ್ಕಾಂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಅವರು ಭಾನುವಾರ ಸಭೆ ನಡೆಸಿದರು.
ವಿದ್ಯುತ್ ತಂತಿ ಮೇಲೆ ಉರುಳುವ ಅಪಾಯಕಾರಿ ಮರ, ವಾಲಿರುವ ವಿದ್ಯುತ್ ಕಂಬಗಳನ್ನು ಮೊದಲೇ ಪತ್ತೆಹಚ್ಚಬೇಕು. ಮಳೆಗಾಲದಲ್ಲಿ ಅಪಾಯ ಸಂಭವಿಸಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಜನರಿಗೂ ಮಾಹಿತಿ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಸಹಿಸಲಾಗದು. ಲೋಕೋಪಯೋಗಿ, ಕಂದಾಯ, ಅರಣ್ಯ ಇಲಾಖೆಗಳು ಮೆಸ್ಕಾಂ ಅಧಿಕಾರಿಗಳ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಅವಘಡ ತಪ್ಪಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ರಿಕ್ಷಾ ಚಾಲಕರಿಬ್ಬರು ಮೃತಪಟ್ಟ ಪಾಂಡೇಶ್ವರ ವ್ಯಾಪ್ತಿಯಲ್ಲಿ ವಿದ್ಯುತ್ ಕೇಬಲ್‌ಗಳನ್ನು ನೆಲದಡಿ ಅಳವಡಿಸುವ ಕಾಮಗಾರಿ ಮುಗಿದಿದೆ. ಬೀದಿ ದೀಪಗಳನ್ನು ಹೊತ್ತಿಸಲು ಎಲ್‌ಟಿ ವಿದ್ಯುತ್ ಮಾರ್ಗವನ್ನು ಪಾಲಿಕೆಯ ಕೋರಿಕೆ ಮೇರೆಗೆ ಉಳಿಸಿಕೊಂಡಿದ್ದೆವು. ಇಲ್ಲಿ ತಂತಿ ತುಂಡಾಗಿ ಬಿದ್ದಿದ್ದರಿಂದ ಅವಘಡ ಉಂಟಾಗಿದೆ. ವಿದ್ಯುತ್ ತಂತಿ ತುಂಡಾದಾಗ ಅದರಲ್ಲಿ ವಿದ್ಯುತ್ ಪ್ರವಹಿಸುವುದನ್ನು ತಪ್ಪಿಸಲು ಟ್ರಿಪರ್ ಅಳವಡಿಸಲಾಗುತ್ತಿದೆ ಎಂದು ಮೆಸ್ಕಾಂ ಎಂಜಿನಿಯರ್ ಒಬ್ಬರು ವಿವರಣೆ ನೀಡಿದರು.
ವಿದ್ಯುತ್ ಪರಿವರ್ತಕಗಳ ಬಳಿ ಜನ ಕಸ ಸುರಿಯುತ್ತಾರೆ. ಈ ತಾಣಗಳು ಕೊಳಕಾಗಿ ಕಾಣಿಸುತ್ತವೆ. ವಿದ್ಯುತ್ ಪರಿವರ್ತಕವೂ ನಗರದ ಸೌಂದರ್ಯ ವರ್ಧನೆಗೆ ಪೂರಕವಾಗಿರುವಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮಾತನಾಡಿ, ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಪರಿವರ್ತಕಗಳ ಸಮೀಪಕ್ಕೆ ಸುಳಿಯದಂತೆ, ಇಂತಹ ಅವಘಢಗಳಲ್ಲಿ ಪ್ರಾಣಹಾನಿ ತಪ್ಪಿಸುವುದು ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಕಿರು ವಿಡಿಯೊ ರೂಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಲೈನ್ ಮ್ಯಾನ್‌ಗಳ ಕೊರತೆ ಇದೆ. ಇಲ್ಲಿಗೆ ನೇಮಕಗೊಳ್ಳುವ ಬೇರೆ ಜಿಲ್ಲೆಯವರು ತಮ್ಮ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಗಮನ ಸೆಳೆದರು. ಇಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಈ ರೀತಿಯ ವರ್ಗಾವಣೆ ಬಯಸುವವರಿಗೆ ನಿರಾಕ್ಷೇಪಣಾ ಪತ್ರ ನೀಡಬೇಡಿ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮಾವತಿ ಡಿ. ಅವರಿಗೆ ಖಾದರ್ ಸೂಚಿಸಿದರು.
ಮಂಗಳೂರು ನಗರದ ಅಭಿವೃದ್ಧಿ ಸಂತೃಪ್ತ ಹಂತವನ್ನು ತಲುಪಿದೆ. ಇನ್ನು ಹೊರವಲಯಗಳಲ್ಲಿ ಮಾತ್ರ ಅಭಿವೃದ್ಧಿಗೆ ಅವಕಾಶ ಇದೆ. ಕಾಲೇಜುಗಳು ಉದ್ಯಮಗಳು ಇನ್ನು ಉಳ್ಳಾಲ ಮೂಲ್ಕಿ ಪ್ರದೇಶಗಳಲ್ಲಿ ತಲೆ ಎತ್ತಲಿವೆ. ಅಭಿವೃದ್ಧಿ ಚಟುವಟಿಕೆಗೆ ನೀರು ಮತ್ತು ರಸ್ತೆ ಸಂಪರ್ಕಕ್ಕಿಂತಲೂ ವಿದ್ಯುತ್ ತೀರಾ ಮುಖ್ಯ. ಹಾಗಾಗಿ ಈ ಪ್ರದೇಶಗಳಲ್ಲಿ ಮುಂದಿನ 30 ವರ್ಷಗಳಲ್ಲಿ ಆಗಬಹುದಾದ ಬೆಳವಣಿಗೆಯ ಮುಂದಾಲೋಚನೆ ಇಟ್ಟುಕೊಂಡು ಅದಕ್ಕೆ ಪೂರಕವಾದ ವಿದ್ಯುತ್ ಮೂಲಸೌಕರ್ಯ ಕಲ್ಪಿಸಬೇಕು ಎಂದು ಯು.ಟಿ.ಖಾದರ್ ಸಲಹೆ ನೀಡಿದರು.
ಸುರಕ್ಷತೆಗೆ ಸಂಬಂಧಿಸಿದ ದೂರು ದಾಖಲಿಸಲು ಮೆಸ್ಕಾಂನ ಪ್ರತ್ಯೇಕ ದೂರವಾಣಿ ಸಂಖ್ಯೆಗಳು ಸೋಮವಾರದಿಂದ ಕಾರ್ಯನಿರ್ವಹಿಸಲಿವೆ. ವಿಧಾನಸಭಾಧ್ಯಕ್ಷರ ಸೂಚನೆ ಮೇರೆ ಈ ಕ್ರಮ ವಹಿಸಲಾಗಿದೆ. ವಿದ್ಯುತ್ ಕಂಬ ವಾಲಿರುವುದು ಹಾಗೂ ತಂತಿಗಳು ಜೋತು ಬಿದ್ದಿರುವುದು ಸೇರಿದಂತೆ ಅಪಾಯ ತಪ್ಪಿಸಲು ನೆರವಾಗುವ ಯಾವುದೇ ಮಾಹಿತಿಯನ್ನೂ ಸಾರ್ವಜನಿಕರು ಹಂಚಿಕೊಳ್ಳಬಹುದು’ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ. ತಿಳಿಸಿದರು. ‘ಮಳೆಗಾಲದಲ್ಲಿ ವಿದ್ಯುತ್ ಅವಘಡ ತಪ್ಪಿಸಲು ವಿಶೇಷ ಮುನ್ನೆಚ್ಚರಿಕಾ ಅಭಿಯಾನ ಹಮ್ಮಿಕೊಂಡಿದ್ದೇವೆ. ಅಪಾಯ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ಪತ್ತೆಗೂ ಕ್ರಮ ವಹಿಸಲಾಗಿದೆ. ಮೆಸ್ಕಾಂನ 64 ಉಪವಿಭಾಗಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯಕೇಂದ್ರಗಳನ್ನು ಆರಂಭಿಸಲಾಗಿದೆ. 800 ಗ್ಯಾಂಗ್‌ಮನ್‌ಗಳು ಮುಂಗಾರುಪೂರ್ವ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ. 56 ವಿಶೇಷ ತಂಡಗಳನ್ನು ರಚಿಸಲಾಗಿದ್ದು ಅವುಗಳಿಗೆ ವಾಹನಗಳನ್ನೂ ಒದಗಿಸಲಾಗಿದೆ. 1912 ಫೇಸ್‌ಬುಕ್ ಟ್ವಿಟರ್ ವಾಟ್ಸ್ ಆಯಪ್ (9483041912) ನನ್ನ ಮೆಸ್ಕಾಂ ಆಯಪ್ ಇಲಾಖೆಯ ವೆಬ್‌ಸೈಟ್ ಸೇವಾ ಸಿಂಧು ಪೋರ್ಟಲ್ ಮೂಲಕವೂ ಸಹಾಯಕ್ಕೆ ಮೆಸ್ಕಾಂ ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ಅರಣ್ಯ ಉಪವಿಭಾಗಾಧಿಕಾರಿ ಆಯಂಟೊನಿ ಮರಿಯಪ್ಪ ಭಾಗವಹಿಸಿದ್ದರು