ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೇತೃತ್ವದಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಮುಡಾ ಸುಪರ್ದಿನಲ್ಲಿ 9 ಸಾವಿರ ನಿವೇಶನಗಳಿದ್ದವು.ಇದರಲ್ಲಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಮಾರಿಕೊಳ್ಳಲಾಗಿದೆ. ಹಿಂದಿನ ಬಿಜೆಪಿ ಸರಕಾರ ಹಾಗೂ ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಯಮ ಬಾಹಿರವಾಗಿ ನಿವೇಶನ ಹಂಚಿಕೆಯಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತನಿಂದ ಮುಡಾ ಅಧೋಗತಿಗೆ ತಲುಪಿದೆ. ಒಂದಷ್ಟು ನಾಯಕರು, ಅಧಿಕಾರಿಗಳು ಸಿಂಡಿಕೇಟ್ ರಚಿಸಿಕೊಂಡಿದ್ದು, ಈ ದಂಧೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಎಲ್ಲ ಆರೋಪಿಗಳನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.