ಮಂಗಳೂರು: ದಕ ಜಿಲ್ಲೆಯಲ್ಲಿ ಬಿಜೆಪಿ ಸೋಲಿಸಲು ಜಾತ್ಯತೀತ ಶಕ್ತಿಗಳು ಒಂದಾಗಿ ಪ್ರತಿಜ್ಞೆ ಮಾಡಿದೆ. ಆಪ್, ಸಿಪಿಐ, ಸಿಪಿಎಂ, ಜನತಾದಳ ಮುಂತಾದ ಪಕ್ಷಗಳು ಮತ್ತು ಜಿಲ್ಲೆಯ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ವೇದಿಕೆಯಲ್ಲಿ ಐಕ್ಯ ಪ್ರದರ್ಶಿಸಿದ್ದಾರೆ. ಕಾರ್ಪೊರೇಟ್ ಹಿತಾಸಕ್ತಿಗಳ ಪರವಾದ ಬಿಜೆಪಿ ಅಭ್ಯರ್ಥಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಲಿಸುವ ಪ್ರತಿಜ್ಞೆಗೈದಿದ್ದಾರೆ.
ಸೋಮವಾರ ಮಂಗಳೂರಿನ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ‘ಜನ ಸಮಾವೇಶ’ದಲ್ಲಿ 25ರಷ್ಟು ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಬಿಜೆಪಿ ವಿರುದ್ಧವಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಜಿಲ್ಲಾ ಘಟಕದ ಮುಖಂಡ ನಝೀರ್ ಉಳ್ಳಾಲ್ ನೇತೃತ್ವದಲ್ಲಿ ಸಮಾವೇಶ ನಡೆಯಿತು.
ದ.ಕ. ಜಿಲ್ಲೆಯಲ್ಲಿ 33 ವರ್ಷಗಳ ಸತತ ಗೆಲುವಿನ ಹೊರತಾಗಿಯೂ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಗಾಗದ, ಜಿಲ್ಲೆಯನ್ನು ಕೋಮು ಉದ್ವಿಗ್ನ ನಗರವೆಂಬ ಕುಖ್ಯಾತಿಗೆ ತಂದ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿ ಜನಪರ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯನ್ನು ಚುನಾಯಿಸುವಂತೆ ಜನರಿಗೆ ಮನವಿ ಮಾಡುವ ಕರಪತ್ರವನ್ನು ಜನ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ದೇಶದ ಭವಿಷ್ಯ, ಸಂವಿಧಾನದ ಉಳಿವು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಅನಿವಾರ್ಯ. ಪ್ಯಾಶಿಸ್ಟ್ ಪ್ರಭುತ್ವ ಮತ್ತೆ ಗೆಲುವು ಸಾಧಿಸಿದರೆ ಈಗ ಅಘೋಷಿತ ತುರ್ತು ಪರಿಸ್ಥಿತಿ ಪೂರ್ಣ ಪ್ರಮಣದ ಸರ್ವಾಧಿಕಾರವಾಗಿ ಅಪ್ಪಳಿಸಲಿದೆ. ಅಪಾರ ಸಂಪನ್ಮೂಲಗಳ ದ.ಕ. ಜಿಲ್ಲೆ ಬರಡಾಗಲಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿರುವ ಇಂಡಿಯಾ ಮಿತ್ರ ಕೂಟದ ಕಾಂಗ್ರೆಸ್ಸೇತರ ಎಡಪಕ್ಷಗಳು, ಆಮ್ ಆದ್ಮಿ ಹಾಗೂ ಜಿಲ್ಲೆಯ ಸಮಾನ ಮನಸ್ಕ ಜನಪರ ಸಂಘಟನೆಗಳಾದ ವಿದ್ಯಾರ್ಥಿ, ಯುವಜನ, ಮಹಿಳಾ, ರೈತ, ಕಾರ್ಮಿಕ, ದಲಿತ, ಆದಿವಾಸಿ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಲಿಬರಲ್ ಸಂಘಟನೆಗಳು ಒಟ್ಟಾಗಿ ಬಿಜೆಪಿ ಕೂಟವನ್ನು ಚುನಾವಣೆಯಲ್ಲಿ ಮತದಾರರು ಸೋಲಿಸಬೇಕು ಎಂಬ ಮನವಿಯನ್ನು ಮಾಡುತ್ತಿದ್ದೇವೆ ಎಂದು ಬಿಡುಗಡೆಗೊಳಿಸಲಾದ ಮನವಿ ಪತ್ರದಲ್ಲಿ ತಿಳಿಸಲಾಗಿದ್ದು, ಅದನ್ನು ಪ್ರತಿ ಮನೆಗಳಿಗೂ ತಲುಪಿಸುವಂತೆ ಸಮಾವೇಶದಲ್ಲಿ ಸೇರಿದ್ದ ವಿವಿಧ ಪಕ್ಷ, ಸಂಘಟನೆಗಳ ನಾಯಕರಿಗೆ ಕರೆ ನೀಡಲಾಯಿತು.