ಮಂಗಳೂರು: ಭಾರತೀಯ ಚುನಾವಣಾ ಆಯೋಗದ ಆಶಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಂಗಳವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 12 ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು.
ಚುನಾವಣೆಯನ್ನು ‘ಎಲ್ಲರೂ ಒಳಗೊಳ್ಳುವ, ಸುಗಮ ಮತ್ತು ಪ್ರತಿಯೊಬ್ಬರೂ ಭಾಗವಹಿಸುವ ಪ್ರಕ್ರಿಯೆಯಾಗಿ ಮಾಡುವʼ ಆಶಯದೊಂದಿಗೆ ನಡೆದ ಈ ಬಾರಿಯ ಆಚರಣೆಗೆ ಪ್ರಾಂಶುಪಾಲೆ ಡಾ. ಅನಸೂಯ ರೈ ಚಾಲನೆ ನೀಡಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿಗಳು ತಮ್ಮ ಬಲಗೈ ಮುಂದಕ್ಕೆ ಚಾಚಿ, ದೇಶದ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯುವ ಭಾಗವಾಗಿ ಮುಕ್ತ- ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡುವ, ಜೊತೆಗೆ ಜಾತಿ, ಧರ್ಮ, ಸಮುದಾಯ, ಭಾಷೆಗಳೆಂಬ ಭೇದವಿಲ್ಲದೆ, ಯಾವುದೇ ಭಯವಿಲ್ಲದೆ ಮತದಾನ ಮಾಡುವ ಪ್ರತಿಜ್ಞೆ ಮಾಡಿದರು.
ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಜ್ಞಾವಿಧಿಯಲ್ಲಿ ಪಾಲ್ಗೊಂಡರು.