Home ಟಾಪ್ ಸುದ್ದಿಗಳು ಮಂಗಳೂರು: ಕುಸಿಯುವ ಭೀತಿಯಲ್ಲಿ ಕೂಳೂರು ಸೇತುವೆ

ಮಂಗಳೂರು: ಕುಸಿಯುವ ಭೀತಿಯಲ್ಲಿ ಕೂಳೂರು ಸೇತುವೆ

ಮಂಗಳೂರು: ನಗರದ ಕೂಳೂರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ 146ರ ಸೇತುವೆ ಕುಸಿಯುವ ಸಾಧ್ಯತೆ ಇದೆಯೆಂದು ಆತಂಕ ವ್ಯಕ್ತವಾಗಿದೆ. ಸೇತುವೆ ಕುಸಿಯುವ ಅಪಾಯ ಎದುರಾಗಲಿದೆಯೇ ಎಂದು ಸೇತುವೆಯ ಬಿರುಕು ಬಿಟ್ಟ ಭಾಗಗಳ ಫೊಟೊ ಹಂಚಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ‌.

ಕೂಳೂರು ಸೇತುವೆ, 4ನೇ ಮೈಲು ಕಿರು ಸೇತುವೆಯ ಗುಣಮಟ್ಟ ಪರೀಕ್ಷಿಸಬೇಕು. ಇವೆರಡೂ ಅಪಾಯದ ಸ್ಥಿತಿಯಲ್ಲಿವೆ. ಅವಘಡಗಳು ಸಂಭವಿಸುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಜಯಕೃಷ್ಣನ್‌ ಒತ್ತಾಯಿಸಿದ್ದಾರೆ.

ಫಲ್ಗುಣಿ ನದಿಗೆ ಕಟ್ಟಿರುವ, ಮಂಗಳೂರು ನಗರಕ್ಕೆ ಪ್ರವೇಶ ಕಲ್ಪಿಸುವ ಕೂಳೂರು ಸೇತುವೆ 1952ರಲ್ಲಿ ಮದ್ರಾಸ್ ಪ್ರಾಂತ್ಯದ ಸಚಿವ ಎನ್. ರಂಗರೆಡ್ಡಿ ಉದ್ಘಾಟಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ. ಈ ಹಳೆಯ ಸೇತುವೆ ಮೇಲೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಕೂಳೂರು ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2018ರಲ್ಲಿ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಆಗ ಹೈದರಾಬಾದ್‌ನ ಮೆ. ಆರ್ವಿ ಅಸೋಸಿಯೇಟ್ಸ್ ಏಜೆನ್ಸಿಯು ಸೇತುವೆ ತಪಾಸಣೆ ನಡೆಸಿತ್ತು. 2020ರಲ್ಲಿ ‘ಮೈಕ್ರೋ ಕಾಂಟೆಸ್ಟ್’ ತಂತ್ರಜ್ಞಾನದೊಂದಿಗೆ 38 ಲಕ್ಷ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ದುರಸ್ತಿಗೊಳಿಸಲಾಗಿತ್ತು. ಆಗಿನ ಸಂಸದ ನಳಿನ್‌ಕುಮಾರ್ ಕಟೀಲ್, ನವೀನ ತಂತ್ರಜ್ಞಾನದೊಂದಿಗೆ ಸೇತುವೆ ಭದ್ರಗೊಳಿಸಲಾಗಿದೆ ಎಂದಿದ್ದರು. ಅದಾಗಿ ನಾಲ್ಕು ವರ್ಷಗಳು ಕಳೆದ ಬಳಿಕ ಈಗ ಸೇತುವೆಯ ಬಗ್ಗೆ ಆತಂಕ ಸೃಷ್ಟಿಯಾಗಿದೆ‌

ಸೇತುವೆಯ ಸಾಮರ್ಥ್ಯ ಯಾವ ಪ್ರಮಾಣದಲ್ಲಿದೆ ಎಂಬುದನ್ನು ತುರ್ತಾಗಿ ತಪಾಸಣೆ ನಡೆಸಬೇಕಾಗಿದೆ ಎಂಬ ಕೂಗು ಕೇಳಿಬರಲಾರಂಭಿಸಿದೆ.

Join Whatsapp
Exit mobile version