ಮಂಗಳೂರು: ನಗರದ ಮೂರು ಶಾಲೆಗಳಿಗೆ ಇಂದು ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಶೋಧ ಕಾರ್ಯಾಚರಣೆ ವೇಳೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ.
ನಗರದ ಅತ್ತಾವರದ ಮಣಿಪಾಲ್ ಶಾಲೆ (ಮಂಗಳೂರು ದಕ್ಷಿಣ ಪೊಲೀಸ್ ಠಾಣೆ), ಪ್ರೆಸಿಡೆನ್ಸಿ ಶಾಲೆ ಮತ್ತು ಪಿಯು ಕಾಲೇಜು ಮತ್ತು ನೀರುಮಾರ್ಗ ಬಳಿಯ ಕೇಂಬ್ರಿಡ್ಜ್ ಶಾಲೆ (ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆ)ಗಳಿಗೆ ತಮ್ಮ ಆವರಣದಲ್ಲಿ ಐಇಡಿಗಳಿವೆ ಎಂದು ಬೆದರಿಕೆ ಇಮೇಲ್‌ಗಳು ಬಂದಿದ್ದವು.
ಬೆಳಗ್ಗೆ ಶಾಲೆ ಆರಂಭವಾದ ಬಳಿಕ ಬಾಂಬ್ ಬೆದರಿಕೆಯ ಮೇಲ್ ಬಂದಿರುವುದು ತಿಳಿದುಬಂದ ತಕ್ಷಣವೇ ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದು ಪರಿಶೀಲನೆ ನಡೆಸಿದರು. ಮುಂಜಾಗೃತ ಕ್ರಮವಾಗಿ ಶಾಲೆಯ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು, ಪರಿಶೀಲನೆಗಳು ಪೂರ್ಣಗೊಂಡಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ. ಇದಲ್ಲದೇ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸುರಕ್ಷತೆ ಖಚಿತಪಡಿಸಿಕೊಳ್ಳಲು ಶಾಲೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಶಾಲಾ ಅಧಿಕಾರಿಗಳಿಗೆ ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾನಾಸ್ಪದ ಚಲನವಲನ ಕಂಡರೆ ತಕ್ಷಣ ಪೊಲೀಸರಿಗೆ ವರದಿ ಮಾಡಲು ಸೂಚಿಸಲಾಗಿದೆ. ಈ ಬೆದರಿಕೆ ಇಮೇಲ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಮತ್ತು ಈ ಇಮೇಲ್‌ಗಳ ಮೂಲದ ಬಗ್ಗೆ ವಿವರವಾದ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.