Home ಟಾಪ್ ಸುದ್ದಿಗಳು ಮಂಗಳೂರು | ಪ್ರಜಾಪ್ರಭುತ್ವ ವ್ಯವಸ್ಥೆ ಪಂಚಾಯತಿ ಮಟ್ಟದಲ್ಲಿ ಕಣ್ಣಿಗೆ ಕಾಣುತ್ತಲಿದೆ:  ಪ್ರಿಯಾಂಕ್ ಖರ್ಗೆ

ಮಂಗಳೂರು | ಪ್ರಜಾಪ್ರಭುತ್ವ ವ್ಯವಸ್ಥೆ ಪಂಚಾಯತಿ ಮಟ್ಟದಲ್ಲಿ ಕಣ್ಣಿಗೆ ಕಾಣುತ್ತಲಿದೆ:  ಪ್ರಿಯಾಂಕ್ ಖರ್ಗೆ

ಮಂಗಳೂರು: ಪ್ರಜಾಪ್ರಭುತ್ವದ ಮೂಲ ಘಟಕ  ಪಂಚಾಯತ್ ರಾಜ್ ವ್ಯವಸ್ಥೆಯಾಗಿದ್ದು, ಪ್ರಜಾಪ್ರಭುತ್ವ ಕೆಲಸ ಮಾಡುತ್ತಿರುವ ರೀತಿಯನ್ನು ಇಲ್ಲಿ ಕಾಣಬಹುದಾಗಿದೆ, ಬುದ್ದ, ಬಸವಣ್ಣ, ನಾರಾಯಣಗುರುಗಳ ತತ್ವದ ಮೇಲೆ ಪಂಚಾಯತ್ ರಾಜ್ ವ್ಯವಸ್ಥೆ ಸ್ಥಾಪನೆ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮಂಗಳೂರಿನ ಪುರಭವನದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಸಚಿವರು ಮಾತನಾಡುತ್ತಿದ್ದರು.

ದೇಶ  21ನೇ ಶತಮಾನದಲ್ಲಿ ಮುಂದುವರೆದ ರಾಷ್ಟ್ರವಾಗಬೇಕು, ವಿಶ್ವದಲ್ಲಿ ಅಗ್ರಸ್ಥಾನ ಪಡೆಯಬೇಕು ಎಂದಾದರೆ, ಕೇವಲ ಸಂಸತ್ ನಲ್ಲಿ ಮಾಡುವ ನೀತಿಯಿಂದ ಅಷ್ಟೇ ಅಲ್ಲ, ನಮ್ಮ ಹಳ್ಳಿಗಳು, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಾಗ ಹಾಗೂ ಸಶಕ್ತಗೊಂಡಾಗ ಮಾತ್ರ ಸಾಧ್ಯ ಎಂದು ರಾಜೀವ್ ಗಾಂಧಿ ಅವರು ಸಂಸತ್ ನಲ್ಲಿ ಮಾಡಿರುವ ಭಾಸಣದಲ್ಲಿ ಅಂದೇ ಹೇಳಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಪಂಚಾಯತಿಗಳ ವ್ಯವಸ್ಥೆಯ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲು ನಿಮ್ಮಅನುಭವಗಳನ್ನು ಕೇಳಿದಾಗ ಮಾತ್ರ ಒಳ್ಳೆಯ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ ಎಂದೂ ಅವರು ಹೇಳಿದರು.

ಮುಂದಿನ ವರ್ಷದಿಂದ ಪಿಡಿಒಗಳ ಕೌನ್ಸೆಲಿಂಗ್ ಮಾಡಿ, ಪಂಚಾಯತಿ ಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತೇವೆ. ಪಿಡಿಒಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಿದ್ದೇವೆ. ಪಿಡಿಒಗಳಿಗಾಗಿ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ಸಿದ್ದತೆ ಮಾಡಿಕೊಂಡಿದ್ದು ಹಾಜರಾತಿಗೆ ಅನುಗುಣವಾಗಿ ಸಂಬಳ ನೀಡಲಿದ್ದೇವೆ ಎಂದು ತಿಳಿಸಿದ ಸಚಿವರು ಪಂಚತಂತ್ರ-2 ಎಂಬ ಹೊಸ ತಂತ್ರಜ್ಞಾನವನ್ನು ಆರಂಭಿಸುತ್ತಿದ್ದೇವೆ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಸಭೆಗಳು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಲು ಈ ತಂತ್ರಜ್ಞಾನ ವ್ಯವಸ್ಥೆಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಮಲೆನಾಡು, ಕರಾವಳಿ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಈ ಸಮಸ್ಯೆಯ ನಿವಾರಣೆಗೆ ನಾವು ವಿಶೇಷ ವಾಟರ್ ಆಡಿಟ್ ಸಮಿತಿ ರಚಿಸಿ ಪರಿಹಾರಕ್ಕೆ ಮುಂದಾಗಿದ್ದು, ಈ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ ಸಚಿವರು  ಸಂವಿಧಾನದ ಪರವಾಗಿರುವ ಸರ್ಕಾರ ನಮ್ಮದಾಗಿದೆ, ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ, ಗುರು ಬಸವಣ್ಣ, ನಾರಾಯಣಗುರುಗಳ ತತ್ವಗಳನ್ನು ಉಳಿಸಿ ಬೆಳೆಸುವ, ನಿಮ್ಮದೇ ಸರ್ಕಾರ ಇದಾಗಿದೆ,  ಉತ್ತಮ ಜನಪರ ವ್ಯವಸ್ಥೆ ನಿರ್ಮಾಣಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ಅವರು ತಿಳಿಸಿದರು..

ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವ ರಮಾನಾಥ ರೈ, ಶಾಸಕರಾದ ಮಂಜುನಾಥ ಭಂಡಾರಿ ಸೇರಿದಂತೆ ಮಾಜಿ ಸಚಿವರು, ಹಿರಿಯ ಮುಖಂಡರು ಹಾಗೂ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಪಂಚಾಯತ್ ಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp
Exit mobile version