Home ಕರಾವಳಿ ಫಾಝಿಲ್, ಮಸೂದ್ ಕುಟುಂಬಗಳಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ತಲಾ 30 ಲಕ್ಷ ರೂ. ಪರಿಹಾರ

ಫಾಝಿಲ್, ಮಸೂದ್ ಕುಟುಂಬಗಳಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ತಲಾ 30 ಲಕ್ಷ ರೂ. ಪರಿಹಾರ

ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಮುಸ್ಲಿಮ್ ಯುವಕರ ಕುಟುಂಬಗಳಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯು ತಲಾ 30 ಲಕ್ಷ ರೂ.ಪರಿಹಾರ ಘೋಷಿಸಿದೆ.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಅಮಾಯಕರ ಕೊಲೆಯಲ್ಲಿ ಕೇವಲ ಪ್ರವೀಣ್ ಎಂಬ ಬಿಜೆಪಿ ಕಾರ್ಯಕರ್ತನ ಮನೆಗೆ ಮುಖ್ಯ ಮಂತ್ರಿ ಭೇಟಿ ನೀಡಿ 25 ಲಕ್ಷ ಪರಿಹಾರ ನೀಡಿದ್ದು ಉಳಿದ ಇಬ್ಬರು ಅಮಾಯಕ ಮುಸ್ಲಿಮರ ಮನೆಗೆ ಭೇಟಿಯನ್ನು ನೀಡದೆ ಮುಖ್ಯಮಂತ್ರಿಯವರ ಅಮಾನವೀಯ ನಿಲುವಿಗೆ ಬೇಸರ ವ್ಯಕ್ತಪಡಿಸಲಾಯಿತು.

ಆದುದರಿಂದ ಮುಸ್ಲಿಂ ಸಮುದಾಯದವರಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ದಾನಿಗಳಿಂದ ವಂತಿಗೆ ಸಂಗ್ರಹಿಸಿ ಮರಣ ಹೊಂದಿದ ಎರಡೂ ಕುಟುಂಬಕ್ಕೆ ತಲಾ 30 ಲಕ್ಷದಂತೆ ಸಹಾಯ ಧನ ನೀಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.  

 ಈ ಸಭೆಯಲ್ಲಿ ಸರ್ಕಾರದ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಮಾಜಿ ಶಾಸಕರಾದ ಮೊಯಿದಿನ್ ಬಾವ,ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ತಾಜ್ ಅಲಿ, ಕೆ.ಅಶ್ರಫ್, ಸೈಯದ್ ಅಹಮದ್ ಬಾಷ ತಂಙಳ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಪರಿಹಾರ ಘೋಷಿಸಿದ್ದರು. ಆದರೆ ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ನೀಡಿಲ್ಲ, ಮಾತ್ರವಲ್ಲ ಪರಿಹಾರವನ್ನೂ ಘೋಷಿಸಿಲ್ಲ. ಇದರಿಂದ ಮುಸ್ಲಿಮ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು.

Join Whatsapp
Exit mobile version