ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕ ಗೆಲ್ಲುವ ಮೂಲಕ ಮಿಂಚಿದ್ದಾರೆ. ಪುರುಷರ ವೇಟ್‌ಲಿಫ್ಟಿಂಗ್‌ನ 61 ಕೆಜಿ ವಿಭಾಗದಲ್ಲಿ ಸ್ನ್ಯಾಚ್ ಮತ್ತು ಕ್ಲೀನ್ & ಜರ್ಕ್‌ನಲ್ಲಿ ಒಟ್ಟು 269 ಕೆಜಿ (ಸ್ನ್ಯಾಚ್ 118 ಕೆ.ಜಿ, ಕ್ಲೀನ್ & ಜರ್ಕ್ 151 ಕೆ.ಜಿ) ಭಾರ ಎತ್ತುವಲ್ಲಿ ಗುರುರಾಜ್ ಸಫಲರಾದರು. ಆ ಮೂಲಕ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತಕ್ಕೆ ಶನಿವಾರ ಎರಡನೇ ಪದಕ ತಂದಿತ್ತರು.
ಇದಕ್ಕೂ ಮೊದಲು ಪುರುಷರ ವೇಟ್‌ಲಿಫ್ಟಿಂಗ್‌ನ 55 ಕೆಜಿ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದರು. 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಎರಡು ಪದಕಗಳು ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಲಭಿಸಿರುವುದು ವಿಶೇಷವಾಗಿದೆ.
ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರುರಾಜ ಪೂಜಾರಿ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ತಮ್ಮ ಭಾರದ ವಿಭಾಗವನ್ನು 56ರಿಂದ 61 ಕೆಜಿ ವಿಭಾಗಕ್ಕೆ ಬದಲಾಯಿಸಿಕೊಂಡಿದ್ದ ಗುರುರಾಜ್ , ಕಂಚಿನ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಜೆಡ್ಡು ಮೂಲದವರಾದ ಗುರುರಾಜ್ ಪೂಜಾರಿ, ಮಹಾಬಲ ಪೂಜಾರಿ ಮತ್ತು ಪದ್ದು ಪೂಜಾರಿ ದಂಪತಿಗಳ ಪುತ್ರ. ವಾಯುಸೇನೆಯಲ್ಲಿ ಉದ್ಯೋಗಿಯಾಗಿದ್ದಾರೆ.