Home ಟಾಪ್ ಸುದ್ದಿಗಳು ಪಾಕ್ ಪರ ಘೋಷಣೆ ಕೂಗಿದವನಿಗೆ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸುವ ಶಿಕ್ಷೆ

ಪಾಕ್ ಪರ ಘೋಷಣೆ ಕೂಗಿದವನಿಗೆ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸುವ ಶಿಕ್ಷೆ

ಜಬಲಪುರ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ಜಾಮೀನು ಮಂಜೂರು ಮಾಡಿರುವ ಮಧ್ಯಪ್ರದೇಶ ಹೈಕೋರ್ಟ್, ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಭೋಪಾಲ್ ಪೊಲೀಸ್ ಠಾಣೆಯ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸುವಂತೆ ಸೂಚಿಸಿದೆ.

ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಫೈಝಲ್ ಅಲಿಯಾಸ್ ಫೈಜಾನ್ ವಿರುದ್ಧ ಕಳೆದ ಮೇ ತಿಂಗಳಿನಲ್ಲಿ ಭೋಪಾಲ್ನ ಮಿಸ್ರೋಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಲಿವಾಲ್ ಅವರು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೌಲ್ಯಕ್ಕೆ ಒಬ್ಬರ ಭದ್ರತೆ ಒದಗಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ತಾನು ಹುಟ್ಟಿ ಬೆಳೆದ ದೇಶದ ವಿರುದ್ಧ ಬಹಿರಂಗವಾಗಿ ಘೋಷಣೆಗಳನ್ನು ಆರೋಪಿ ಕೂಗಿದ್ದಾನೆ ಎಂದು ಹೇಳಿರುವ ನ್ಯಾಯಾಲಯ, ‘ವಿಚಾರಣೆ ಮುಗಿಯುವರೆಗೂ ಆರೋಪಿಯು ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರ ಭೋಪಾಲ್ ನ ಮಿಸ್ರೋಡ್ ಪೊಲೀಸ್ ಠಾಣೆಯ ಮುಂದೆ ಹಾಜರಾಗಬೇಕು. ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವ ಮೂಲಕ ಠಾಣೆಯ ಮೇಲೆ ಹಾರಿಸಿರುವ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸಬೇಕು’ ಎಂದು ಸೂಚಿಸಿದೆ.

Join Whatsapp
Exit mobile version