Home ಟಾಪ್ ಸುದ್ದಿಗಳು ಇಸ್ರೇಲ್ ಜೊತೆಗೆ ಸಂಬಂಧ ಸಹಜ ಸ್ಥಿತಿಗೆ ಮರಳಬೇಕೆಂದ ಮಕ್ಕಾದ ಇಮಾಮ್ ಸುದೈಸ್ ! ‘ಯಹೂದಿ...

ಇಸ್ರೇಲ್ ಜೊತೆಗೆ ಸಂಬಂಧ ಸಹಜ ಸ್ಥಿತಿಗೆ ಮರಳಬೇಕೆಂದ ಮಕ್ಕಾದ ಇಮಾಮ್ ಸುದೈಸ್ ! ‘ಯಹೂದಿ ಧರ್ಮಗುರು’ ಎಂದ ನೆಟ್ಟಿಗರು!

ಸೌದಿ ಅರೇಬಿಯಾದ ಎರಡು ಪವಿತ್ರ ಮಸೀದಿಗಳ ವ್ಯವಹಾರಗಳ ಉಸ್ತುವಾರಿ ಮುಖ್ಯಸ್ಥ ಹಾಗೂ ಮಕ್ಕಾ ಮಸೀದಿಯ ಇಮಾಮ್ ಆಗಿರುವ ಅಬ್ದುಲ್ ರಹಿಮಾನ್ ಅಲ್ ಸುದೈಸ್,  ತನ್ನ ಶುಕ್ರವಾರದ ಪ್ರವಚನದಲ್ಲಿ,  ಸೌದಿ ಅರೇಬಿಯಾವು ಇಸ್ರೇಲ್ ಜೊತೆಗಿನ ತನ್ನ ಸಂಬಂಧಗಳನ್ನು ಮರುಸ್ಥಾಪಿಸಬೇಕೆಂಬ ನಿಟ್ಟಿನಲ್ಲಿ ಹಲವು ಸೂಚನೆಗಳುಳ್ಳ ಪ್ರವಚನ ನೀಡಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು,  ಅಲ್ ಸುದೈಸ್ ಅವರನ್ನು ‘ರಬ್ಬಿ’ (ಯಹೂದಿ ಧರ್ಮಗುರು) ಎಂದು ಮೂದಲಿಸಿದ್ದಾರೆ.

 ಅಬ್ದುಲ್ ರಹಿಮಾನ್ ಅಲ್ ಸುದೈಸ್ ಅವರು ಕಳೆದ ಶುಕ್ರವಾರ, ಪ್ರಾರ್ಥನೆಗೂ ಮೊದಲು ನಡೆಸುವ ಪ್ರವಚನದಲ್ಲಿ ಪ್ರವಾದಿ ಮುಹಮ್ಮದರು ಅನ್ಯ ಧರ್ಮೀಯರೊಂದಿಗೆ ಅನ್ಯೋನ್ಯತೆಯಿಂದ ಇದ್ದ ಘಟನೆಗಳನ್ನು ಪ್ರಸ್ತಾಪಿಸಿ, ಪ್ರಸಕ್ತ ಮುಸ್ಲಿಮ್ ಜಗತ್ತು ತಮ್ಮ ಬಗ್ಗೆ ಇರುವ ಸುಳ್ಳು ಹಾಗೂ ಅನುಮಾನಾಸ್ಪದ  ನಂಬಿಕೆಗಳಿಂದ ತಮ್ಮನ್ನು ಶುದ್ಧಗೊಳಿಸಬೇಕೆಂದು ಹೇಳಿದ್ದರು. ಅನ್ಯ ಧರ್ಮೀಯರೊಂದಿಗೆ ಅನ್ಯೋನ್ಯತೆಯಿಂದಿರಬೇಕೆಂದು ಹೇಳಿರುವುದು ತಪ್ಪಲ್ಲದಿದ್ದರೂ, ಹೇಳಿರುವ ಸಂದರ್ಭ ಮಾತ್ರ ಸಂದೇಹಾಸ್ಪದವಾಗಿದೆ.

ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್, ಅರಬ್ ಜಗತ್ತಿನೊಂದಿಗಿನ ತನ್ನ ಸಂಬಂಧಗಳನ್ನು ಮರುಸ್ಥಾಪಿಸುವ ಮತ್ತು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈ ಪ್ರಕ್ರಿಯೆಯನ್ನು ಯುಎಇ ಇತ್ತೀಚೆಗೆ ಧನಾತ್ಮಕ ನಡೆಗಳಿಂದ ಇದನ್ನು ಅಂಗೀಕರಿಸಿತ್ತು. ಸೌದಿ, ಬಹರೈನ್, ಕತಾರ್ ಹಾಗೂ ಸುಡಾನ್ ಗಳು ಈ ಕುರಿತು ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದವು. ಅದರಲ್ಲೂ ಕತಾರ್ ದೊರೆ ನೇರವಾಗಿ, “ಫೆಲೆಸ್ತೀನ್ ರಾಷ್ಟ್ರ ನಿರ್ಮಾಣ ಸಾಧ್ಯವಾದರೆ ಮಾತ್ರವೇ ಅಲ್ಲಿನ ಉದ್ವಿಗ್ನತೆ ಕಡಿಮೆಯಾಗಲು ಮತ್ತು ಅರಬ್ ಜಗತ್ತಿನೊಂದಿಗಿನ ಇಸ್ರೇಲ್ ಸಂಬಂಧ ಸಹಜ ಸ್ಥಿತಿಗೆ ಮರಳಬಹುದು” ಎಂದು ತಮ್ಮನ್ನು ಭೇಟಿ ಮಾಡಿದ್ದ ಅಮೆರಿಕಾ ವಿದೇಶ ಕಾರ್ಯದರ್ಶಿಗೆ ಹೇಳಿದ್ದರು.

ಈ ನಡುವೆ ಹಲವು ಇಸ್ರೇಲಿಗರು ಮಕ್ಕಾದ ಇಮಾಂ ಅವರ ಈ ಪ್ರವಚನ ಇಸ್ರೇಲ್ ಜೊತೆಗಿನ ಸೌದಿ ನಿಲುವಿನ ಕುರಿತಂತೆ ಮಹತ್ವದ ಹೇಳಿಕೆ ಎಂದು ಬಣ್ಣಿಸಿದ್ದಾರೆ. ಹಲವು ಇಸ್ರೇಲಿ ಮಾಧ್ಯಮಗಳು ಕೂಡಾ ಇಮಾಂ ಅವರ ಪ್ರವಚನವನ್ನು ಸಂಬಂಧ ಸಹಜ ಸ್ಥಿತಿಯ ಸ್ಥಾಪನೆಗೆ ಸೌದಿಯ ಸಾಮೀಪ್ಯದ ಸಂಕೇತ ಎಂದು ಹೇಳಿದೆ. ಇದೇ ವೇಳೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಪರ ಒಲವುಳ್ಳ ಹಲವರು ಈ ಪ್ರವಚನವನ್ನು ಬೂಟಾಟಿಕೆಯ ಪರಮಾವಧಿ ಎಂದಿದ್ದಾರೆ. ಮತ್ತೋರ್ವರು ಸುದೈಸಿಯವರ ಫೋಟೋವನ್ನು ಟ್ವೀಟ್ ಮಾಡಿ “ನಾನು ಇಮಾಂ ಅಲ್ಲ, ಯಹೂದಿ ಧರ್ಮಗುರು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅದೇ ರೀತಿ ಹಲವರು ಇಮಾಂ ಅವರ ಪ್ರವಚನದ ಕುರಿತಂತೆ ನಕಾರಾತ್ಮಕವಾಗಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

https://twitter.com/umarkhattab35/status/1302251310255931392

Join Whatsapp
Exit mobile version