Home ಗಲ್ಫ್ ಸೌದಿಯಲ್ಲಿ ಸಂಕಷ್ಟದಲ್ಲಿದ್ದ 42 ಮಂದಿ ಭಾರತೀಯ ಕಾರ್ಮಿಕರು | ಭಾರತಕ್ಕೆ ಮರಳಲು ನೆರವಾದ ಐ.ಎಸ್.ಎಫ್

ಸೌದಿಯಲ್ಲಿ ಸಂಕಷ್ಟದಲ್ಲಿದ್ದ 42 ಮಂದಿ ಭಾರತೀಯ ಕಾರ್ಮಿಕರು | ಭಾರತಕ್ಕೆ ಮರಳಲು ನೆರವಾದ ಐ.ಎಸ್.ಎಫ್

 ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 42 ಮಂದಿ  ಕಾರ್ಮಿಕರನ್ನು ಭಾರತೀಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ದೇಶಕ್ಕೆ ಮರಳಿಸಲು ಇಂಡಿಯನ್ ಸೋಶಿಯಲ್ ಫ಼ೋರಂ, ಜಿದ್ದಾ, ಕರ್ನಾಟಕ ಘಟಕವು ನೆರವಾಗಿದೆ.

ಕಾರ್ಮಿಕರು ಎರಡು ವರ್ಷಗಳ‌ ಹಿಂದೆ ಸಈದ್ ಲೇಬರ್ ಕಾಂಟ್ರಾಕ್ಟ್ ಕಂಪೆನಿಯ ವೀಸಾದ ಮೂಲಕ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದರು. ಕಂಪೆನಿಯ ಕಾಂಟ್ರ್ಯಾಕ್ಟ್ ಅವಧಿ ಎರಡು ವರ್ಷ ಪೂರೈಸಿದರೂ ಕಂಪೆನಿ ವೀಸಾ ನವೀಕರಿಸಿರಲಿಲ್ಲ ಮತ್ತು ಹಲವು ತಿಂಗಳುಗಳಿಂದ ವೇತನವನ್ನೂ  ನೀಡುತ್ತಿರಲಿಲ್ಲ. ಇತ್ತ ಊರಿಗೂ ಹೋಗಲಾಗದೇ, ವೇತನವೂ ಇಲ್ಲದೆ ಭಾರತೀಯ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.

 ಸಂತ್ರಸ್ತ ಕಾರ್ಮಿಕರಲ್ಲೊಬ್ಬರಾದ  ಮಂಗಳೂರು ಮೂಲದ ಶಕೀಲ್  ಎಂಬವರು  ಇಂಡಿಯನ್ ಸೋಶಿಯಲ್ ಫೋರಮ್ ಜಿದ್ದಾ ಘಟಕವನ್ನು ಸಂಪರ್ಕಿಸಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಐ.ಎಸ್.ಎಫ್ ಅಧ್ಯಕ್ಷ ಕಲಂದರ್ ಸೂರಿಂಜೆ ನೇತೃತ್ವದ  ರಶೀದ್ ಕುತ್ತಾರ್, ಅಶ್ರಫ್ ಬಜ್ಪೆ(ಅಹುಜಾನ್) ರವರನ್ನೊಳಗೊಂಡ ತಂಡ ಭಾರತೀಯ ದೂತಾವಾಸ ಕಚೇರಿಗೆ ಮಾಹಿತಿ ನೀಡಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಭಾರತೀಯ ದೂತಾವಾಸ ಕಚೇರಿ, ಸಂತ್ರಸ್ತರ ಕಂಪೆನಿಯನ್ನು ಸಂಪರ್ಕಿಸಿ  ಕಾರ್ಮಿಕರ ಬಾಕಿ ವೇತನ ಹಾಗು ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಸಂಕಷ್ಟಕ್ಕೊಳಗಾದ ಆರು ಕನ್ನಡಿಗರು ಸೇರಿದಂತೆ 42 ಭಾರತೀಯರು ಇಂಡಿಯನ್ ಸೋಶಿಯಲ್ ಫೋರಮ್ ನ ಸಕಾಲಿಕ ಮಧ್ಯಪ್ರವೇಶದಿಂದಾಗಿ ಮರಳಿ ತಾಯ್ನಾಡು ಸೇರುವಂತಾಗಿದೆ.

Join Whatsapp
Exit mobile version