►ಶಿಕ್ಷಣ ವ್ಯವಸ್ಥೆಯು ಇಂದು ಹಿಂದುತ್ವದ ಕೈಗಳಲ್ಲಿ ಉಸಿರುಗಟ್ಟಿದೆ – ಚಿದಂಬರ
ಚಿಕ್ಕಮಗಳೂರು: ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಾಗೂ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ , ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ ವಿಚಾರ ಸಂಕಿರಣ ಕಾರ್ಯಕ್ರಮವು ಚಿಕ್ಕಮಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ ದೇಶದ ಅಭಿವೃದ್ದಿಗೆ ಪೂರಕವಾಗಿರುವ ಶಿಕ್ಷಣ ವ್ಯವಸ್ಥೆಯು ಇಂದು ಹಿಂದುತ್ವ ಸಿದ್ದಾಂತದ ಹೇರಿಕೆಯ ಮುಖಾಂತರ ವಿಷಮುಕ್ತಗೊಳ್ಳುತ್ತಿದೆ, ರಾಷ್ಟ್ರೀಯ ಶಿಕ್ಷಣ ನೀತಿಯ ಮುಖಾಂತರ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ನಡೆಸುವ ಮುಖಾಂತರ ಬ್ರಾಹ್ಮಣೀಕರಣದ ಅಜೆಂಡಾದೊಂದಿಗೆ ಬಿಜೆಪಿ-ಆರ್ಎಸ್ಎಸ್ ಕಲುಷಿತಗೊಳಿಸುತ್ತಿದೆ ಇದರ ವಿರುಧ್ದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಜ್ಜಾಗಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕರಾದ ಚಿದಂಬರರವರು ಮಾತನಾಡಿ ಶೋಷಿತ ವರ್ಗವು ಇಂದಿಗೂ ಶಿಕ್ಷಣದಿಂದ ವಂಚಿತರಾಗುತ್ತಲೇ ಇದೆ, ಬ್ರಾಹ್ಮಣ್ಯ ಅಧಿಪತ್ಯವು ಇಂದು ಒಂದು ವರ್ಗವನ್ನು ಶಿಕ್ಷಣದಿಂದ ತಡೆಯುತ್ತಿದ್ದು ಈ ಅಧಿಪತ್ಯವನ್ನು ನಾವು ಸೋಲಿಸಬೇಕಾಗಿದೆ. ಈ ದೇಶದ ಮೂಲನಿವಾಸಿಗಳಾದ ಬಹುಸಂಖ್ಯಾತರಾಗಿರುವ ದಲಿತರು,ಮುಸಲ್ಮಾನರು ಒಟ್ಟಾಗಿ ಸೇರಿದರೆ ಇಲ್ಲಿನ ಈ ಕೇಸರೀಕರಣವನ್ನು ಖಂಡಿತವಾಗಿಯೂ ತಡೆಯಬಹುದು ಎಂದು ಹೇಳಿದರು.
ಕ್ಯಾಂಪಸ್ ಫ್ರಂಟ್ ಜಿಲ್ಲಾ ನಾಯಕಿ ಶಝ್ಮಾ ಫಾತಿಮಾ ಕೇಸರೀಕರಣದಿಂದ ವಿದ್ಯಾರ್ಥಿನಿಯರು ಎದುರಿಸಲಿರುವ ಸವಾಲುಗಳನ್ನು ವಿವರಿಸಿದರು. ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಸಮಾರೋಪ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ರಸೂಲ್ ಖಾನ್ ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ಫರಾನ್ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಶಹಬಾಝ್ ಕಾರ್ಯಕ್ರಮ ನಿರೂಪಿಸಿದರು.