Home ಟಾಪ್ ಸುದ್ದಿಗಳು ಧ್ವಜ ತೆರವುಗೊಳಿಸಿದ ಹಿನ್ನಲೆಯಲ್ಲಿ ಭುಗಿಲೆದ್ದ ಸಂಘರ್ಷ | ಅಮರಾವತಿಯ ಅವಳಿ ನಗರಗಳಲ್ಲಿ ಕರ್ಫ್ಯೂ

ಧ್ವಜ ತೆರವುಗೊಳಿಸಿದ ಹಿನ್ನಲೆಯಲ್ಲಿ ಭುಗಿಲೆದ್ದ ಸಂಘರ್ಷ | ಅಮರಾವತಿಯ ಅವಳಿ ನಗರಗಳಲ್ಲಿ ಕರ್ಫ್ಯೂ

ಅಮರಾವತಿ: ಹಬ್ಬಗಳ ಪ್ರಯುಕ್ತ ಹಾಕಲಾಗಿದ್ದ ಧ್ವಜಗಳನ್ನು ಕಿತ್ತುಹಾಕಿದ ಹಿನ್ನಲೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಆರಂಭವಾಗಿ ಪರಸ್ಪರ ಕಲ್ಲುತೂರಾಟ ನಡೆಸಿದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಅವರಾವತಿಯ ಜಿಲ್ಲೆಯ ಅವಳಿ ನಗರಗಳಾದ ಅಚಲಪುರ ಮತ್ತು ಪರತ್ವಾಡದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಎರಡೂ ಗುಂಪಿನ 22 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಕಾಂತ್ ಸತವ್ ಹೇಳಿದ್ದಾರೆ. 

ಅಚಲಪುರದ ಕಿಡ್ಕಿ ಗೇಟ್ ಮತ್ತು ದುಲ್ಹಾ ಗೇಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಧಾರ್ಮಿಕ ದ್ವಜಗಳನ್ನು ತೆರವುಗೊಳಿಸಿದ ಪರಿಣಾಮ ಭಾನುವಾರ ಸಂಜೆ ಎರಡು ಸಮುದಾಯಗಳ ನಡುವೆ ಗಲಾಟೆ ಆರಂಭವಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಗಲಾಟೆಯಲ್ಲಿ  ಇಬ್ಬರು ಪೊಲೀಸರಿಗೂ ಸಣ್ಣ ಗಾಯಗಳಾಗಿವೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಹಾಂಗೀರ್‌ಪುರಿ ಕೋಮು ಘರ್ಷಣೆಯ ಬೆನ್ನಲ್ಲೇ ಅಮರಾವತಿ ಹಿಂಸಾಚಾರ ಭುಗಿಲೆದ್ದಿತ್ತು.

ಮುಂಜಾಗ್ರತಾ ಕ್ರಮವಾಗಿ ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್‌ಆರ್‌ಪಿಎಫ್‌) ಮೂರು ತಂಡ, ಸಮೀಪದ ಅಕೋಲಾ ಜಿಲ್ಲೆಯ 100 ಪೊಲೀಸ್ ಸಿಬ್ಬಂದಿ ಮತ್ತು ಅಮರಾವತಿ ಪೊಲೀಸ್ ಪಡೆಯ 300 ಪೊಲೀಸರನ್ನು ಅವಳಿ ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಮರಾವತಿ ಐಜಿ ಚಂದ್ರ ಕಿಶೋರ್ ಮೀನಾ ತಿಳಿಸಿದ್ದಾರೆ.

ರಾಮನವಮಿ ಆಚರಣೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. ಮಖುರ್ದ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಇದುವರೆಗೆ 30 ಜನರನ್ನು ಬಂಧಿಸಲಾಗಿದೆ. ಗಲಭೆ ವೇಳೆ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ 23 ಮಂದಿ ಸೇರಿ, ವಿವಿಧ ಪ್ರಕರಣಗಳಲ್ಲಿ ಇದುವರೆಗೂ ಒಟ್ಟು 61 ಜನರನ್ನು ಬಂಧಿಸಲಾಗಿದೆ ಎಂದು ಮಹರಾಷ್ಟ್ರ ಪೊಲೀಸರು ತಿಳಿಸಿದ್ದಾರೆ. 

ಅಮರಾವತಿಯಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕೋಮುಗಲಭೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ದಿಲಿ ವಾಲ್ಸೆ-ಪಾಟೀಲ್ ಹೇಳಿದ್ದಾರೆ. ಜಾತಿ ಮತ್ತು ಸಮುದಾಯದ ವಿಚಾರಗಳಲ್ಲಿ ಬಿರುಕು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆ ಕೆರಳಿಸುವ ವಿಷಯಗಳನ್ನು ಹಂಚಲಾಗುತ್ತಿದೆ. ಇಂತಹ ಪೋಸ್ಟ್‌ಗಳ ಮೇಲೆ ಸೈಬರ್ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ಸಚಿವರು ಎಚ್ಚರಿಸಿದ್ದಾರೆ. 

Join Whatsapp
Exit mobile version