Home ಟಾಪ್ ಸುದ್ದಿಗಳು ಮಾಧುಸ್ವಾಮಿ ಆಡಿಯೋ ಪ್ರಕರಣ: ರಾಜೀನಾಮೆಗಾಗಿ ಸ್ವಪಕ್ಷದಲ್ಲೇ ಆಗ್ರಹ

ಮಾಧುಸ್ವಾಮಿ ಆಡಿಯೋ ಪ್ರಕರಣ: ರಾಜೀನಾಮೆಗಾಗಿ ಸ್ವಪಕ್ಷದಲ್ಲೇ ಆಗ್ರಹ

ಕೋಲಾರ: ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೆ. ಚುನಾವಣೆ ಬರೋವರೆಗೂ ತಳ್ತಾ ಇದ್ದೀವಿ ಎಂದು ರೈತರ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ ಸಚಿವ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಸ್ವ ಪಕ್ಷದ ಕೆಲವು ಸಚಿವರು ಅದನ್ನು ಸಮರ್ಥಿಸಿದರೆ, ಇನ್ನು ಕೆಲವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಚಿವ ಅಶ್ವತ್ಥ ನಾರಾಯಣ್, ಈ ಆಡಿಯೋ ಮಾಧುಸ್ವಾಮಿಯದ್ದಲ್ಲ, ಪ್ರತಿಪಕ್ಷಗಳ ಕುತಂತ್ರ ಎಂದು ಸಮರ್ಥಿಸಿಕೊಂಡಿದ್ದರೆ, ಸಚಿವ ಮುನಿರತ್ನ,  ಮಾಧುಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ರಾಮನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಅಶ್ವಥ ನಾರಾಯಣ್, ನಮ್ಮ ಸರ್ಕಾರ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಮಾಧುಸ್ವಾಮಿ ಆ ರೀತಿ ಹೇಳಿರಲು ಸಾಧ್ಯವೇ ಇಲ್ಲ. ಇದೆಲ್ಲ ಶಕುನಿಗಳ ಕೆಲಸ ಎಂದಿದ್ದಾರೆ.

 ಕೋಲಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುನಿರತ್ನ, ಸರ್ಕಾರ ನಡೆಯುತ್ತಿಲ್ಲ,ಮ್ಯಾನೇಜ್ ಮಾಡ್ತಿದ್ದೇವೆ ಎಂಬ ಹೇಳಿಕೆ ಅವರ ಹಿರಿತನಕ್ಕೆ ಶೋಭೆ ತರೋದಿಲ್ಲ. ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಸರ್ಕಾರದಲ್ಲಿ ಮಾಧುಸ್ವಾಮಿ ಸಹ ಒಂದು ಭಾಗ. ಸಂಪುಟದ ಪ್ರತಿಯೊಂದು ಅಂಶದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.

Join Whatsapp
Exit mobile version