ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರು ಗೆದ್ದಿರುವ ಉದಾಹರಣೆ ಇಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಈ ಮೂಲಕ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಸ್ಪರ್ಧೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಹೊರಗಿನಿಂದ ಬಂದವರು ಜನರ ಮನಸ್ಸು ಗೆಲ್ಲಲು ಸಾಧ್ಯವಾಗಿಲ್ಲ. ಹಲವರು ಸೋತಿರುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ ಎಂದಿದ್ದಾರೆ.
ಈ ಕ್ಷೇತ್ರದಿಂದ ಹಿಂದೆ ಕೋದಂಡರಾಮಯ್ಯ, ಎ.ಕೃಷ್ಣಪ್ಪ, ಎಚ್.ಡಿ.ದೇವೇಗೌಡ ಸ್ಪರ್ಧಿಸಿ ಸೋತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಫಲಿತಾಂಶ ಏನಾಯಿತು ಎಂಬುದು ಗೊತ್ತಿದೆ. ಈಗ ಬಿಜೆಪಿ- ಜೆಡಿಎಸ್ ಒಪ್ಪಂದವಾಗಿದೆ. ಆದರೆ ನಾಯಕರು ಒಂದಾದ ತಕ್ಷಣ ಕಾರ್ಯಕರ್ತರು ಒಟ್ಟಾಗುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಮಾಧುಸ್ವಾಮಿ ಸ್ಪರ್ಧಿಸಿದರೆ ಗೆಲ್ಲುವುದು ಕಷ್ಟ. ಆದರೆ ಸೋಮಣ್ಣ ಅವರು ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲವಾಗಬಹುದು ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ ಮಾಧುಸ್ವಾಮಿ ಸೋಮಣ್ಣ ಸ್ಪರ್ಧೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.