Home Uncategorized ಕೆಲಸದಿಂದ ಕಿತ್ತು ಹಾಕಿದ ಮಾಲೀಕ| ಬಸ್ ಕಂಡಕ್ಟರ್ ಮಾಡಿದ ಪ್ರತೀಕಾರ ಏನು ಗೊತ್ತಾ?

ಕೆಲಸದಿಂದ ಕಿತ್ತು ಹಾಕಿದ ಮಾಲೀಕ| ಬಸ್ ಕಂಡಕ್ಟರ್ ಮಾಡಿದ ಪ್ರತೀಕಾರ ಏನು ಗೊತ್ತಾ?

ಮಧ್ಯಪ್ರದೇಶ: ತನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಕೋಪಗೊಂಡು, ಬಸ್ ಕಂಡಕ್ಟರೊಬ್ಬ ಬಸ್‌ಗೆ ಅಳವಡಿಸಿದ್ದ ಎಲ್‌ಇಡಿ ಫಲಕದಲ್ಲೇ ಮಾಲೀಕನಿಗೆ ಕೆಟ್ಟದಾಗಿ ಬೈದು ಹೆಸರು ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ಭಾನುವಾರ ನಡೆದಿದೆ.

ಪ್ರಯಾಣಿಕರಿಗೆ ಬಸ್ಸಿನ ದಾರಿಯ ವಿವರ ಹಾಕುವ ಎಲ್‌ಇಡಿ ಫಲಕದಲ್ಲೇ ಹಿಂದಿಯಲ್ಲಿ ಕೆಟ್ಟ ಬೈಗುಳವಾಗಿರುವ ‘ಮ….ಚೋ….'(ತಾ………..ಡ) ಎಂದು ಬೈದು ಮಾಲೀಕನ ಹೆಸರು ಹಾಕಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಬಸ್ ಕಂಡಕ್ಟರ್‌ನ ಕೃತ್ಯಕ್ಕೆ ಮಾಲೀಕ ಸದ್ಯ ಬೆಲೆ ತೆರಬೇಕಾದ ಸ್ಥಿತಿ ಬಂದೊದಗಿದೆ.

‘ಸುಖೇಜಾ ಬಸ್ ಸರ್ವಿಸಸ್’ ಎಂಬ ಸಂಸ್ಥೆಗೆ ಸೇರಿದ ಬಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್‌ನನ್ನು ಮಾಲೀಕ ವಜಾ ಮಾಡಿದ್ದ ಹಿನ್ನೆಲೆಯಲ್ಲಿ ಮಾಲೀಕನಿಗೆ ಅವಮಾನವಾಗಲು ಈ ಕೆಲಸ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಈ ಬಸ್ ಮಧ್ಯಪ್ರದೇಶದ ಸತ್ನಾ ಮತ್ತು ಇಂಧೋರ್ ನಡುವೆ ಸಂಚರಿಸುತ್ತಿತ್ತು.

ಪ್ರಯಾಣಿಕರನ್ನು ಹತ್ತಿಸಲು ಸಂಸ್ಥೆಯ ಕಚೇರಿಯ ಬಳಿ ಬಸ್‌ ಬಂದಿದ್ದ ಸಂದರ್ಭದಲ್ಲಿ ಎಲ್‌ಇಡಿ ಬೋರ್ಡ್‌ನಲ್ಲಿ ಮಾಲೀಕನಿಗೆ ಕೆಟ್ಟದ್ದಾಗಿ ಬೈದಿರುವುದನ್ನು ಗಮನಿಸಿ, ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ.

https://twitter.com/Roshan_Abbas_/status/1582803603621715968

ಸತ್ನಾದಿಂದ ಇಂಧೋರ್‌ಗೆ ಹೋಗುತ್ತಿದ್ದ ಬಸ್ಸನ್ನು ನೋಡಿದವರು ಒಂದು ನಿಮಿಷ ಬಸ್ಸನ್ನೇ ದಿಟ್ಟಿಸಿ ನೋಡುತ್ತಿದ್ದರು. ಬಸ್ ನೋಡಿ ಕೆಲವರು ನಗತೊಡಗಿದರೆ, ಇನ್ನು ಕೆಲವರು ವಿಡಿಯೋ ಮಾಡತೊಡಗಿದರು. ಆದರೆ, ಬಸ್ಸಿನಲ್ಲಿ ಕುಳಿತಿದ್ದ ಚಾಲಕರಿಗಾಗಲೀ, ಕಚೇರಿಯಲ್ಲಿದ್ದ ಸಿಬ್ಬಂದಿಗಾಗಲೀ ಈ ಕುರಿತು ಗೊತ್ತಿರಲಿಲ್ಲ. ಸ್ಟ್ಯಾಂಡ್‌ನಲ್ಲಿ ಏನಾಯಿತು ಎಂಬುದನ್ನು ಅರಿತುಕೊಂಡ ನಂತರ ಚಾಲಕ, ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಬೋರ್ಡ್ ಅನ್ನು ಆಫ್ ಮಾಡಿದ್ದಾನೆ. ಆದರೆ ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸ್ಥಳೀಯ ಬಿಜೆಪಿ ಮುಖಂಡ ಸತೀಶ್ ಸುಖೇಜಾ ಈ ಬಸ್ಸಿನ ಮಾಲೀಕರಾಗಿದ್ದು, ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವಿಚಿತ್ರ ಘಟನೆ ಭಾನುವಾರ ಸತ್ನಾದಲ್ಲಿ ನಡೆದಿದೆ.

ಬಸ್ ಮಾಲೀಕ ಸತೀಶ್ ಸುಖೇಜಾ ಅವರು ಕೊಲ್ಗಾವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ, “ಇದು ತನ್ನ ಹಳೆಯ ಉದ್ಯೋಗಿಯ (ಕಂಡಕ್ಟರ್) ಕಿಡಿಗೇಡಿತನವಾಗಿರಬಹುದು” ಎಂದು ತಿಳಿಸಿದ್ದಾರೆ.

ತನ್ನ ಬಳಿ ಸಲ್ಮಾನ್ ಖಾನ್ ಎಂಬ ಉದ್ಯೋಗಿ ಇದ್ದನು ಎಂದಿರುವ ಅವರು, ಕೆಲ ತಿಂಗಳ ಹಿಂದೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಅವನಿಗೆ ಡಿಸ್‌ಪ್ಲೇ ಪಾಸ್‌ವರ್ಡ್ ಗೊತ್ತಿತ್ತು. ಪಾಸ್‌ವರ್ಡ್ ಬಳಸಿ ಡಿಸ್‌ಪ್ಲೇಯಲ್ಲಿ ಈ ಬೈಗುಳ ಬರುವಂತೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version